ಮಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಪದ್ಮಜಾ ರಾವ್ ವಿರುದ್ದ ಮಂಗಳೂರಿನ ಜೆಎಂಎಫ್ ಸಿ ಐದನೇ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲೀಗ ನಟಿಗೆ ಬಂಧನದ ಭೀತಿ ಎದುರಾಗಿದೆ.

ನಿರ್ದೇಶಕ ಹಾಗೂ ನಟ ವೀರೇಂದ್ರ ಶೆಟ್ಟಿ ಮಾಲೀಕತ್ವದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್ ನಿಂದ ನಟಿ ಪದ್ಮಜಾ ರಾವ್ ಅವರು 40 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಅಲ್ಲದೇ ಸಾಲದ ಭದ್ರತೆಗಾಗಿ 40 ಲಕ್ಷ ರೂಪಾಯಿ ಚೆಕ್ ನ್ನು ನೀಡಿದ್ದರು. ಆದರೆ ಪಡೆದುಕೊಂಡಿದ್ದ ಸಾಲ ವಾಪಾಸ್ ನೀಡಿರಲಿಲ್ಲ. ಅಲ್ಲದೇ ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿತ್ತು.

ಈ ಹಿನ್ನೆಲೆಯಲ್ಲಿ ವೀರೆಂದ್ರ ಶೆಟ್ಟಿ ಅವರು ಮಂಗಳೂರಿನ ಜೆ.ಎಂ.ಎಫ್ ಸಿ ಐದನೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಆದರೆ ನ್ಯಾಯಾಲಯಕ್ಕೆ ಪದ್ಮಜಾ ರಾವ್ ಹಾಜರಾಗಿರಲಿಲ್ಲ. ಅಲ್ಲದೇ ಸಮನ್ಸ್ ಸ್ವೀಕಾರ ಮಾಡದ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.