ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿರುವ ಬೆನ್ನಲ್ಲೇ ವಿಶ್ವ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾಟಕ್ಕೆ ನಲುಗಿ ಹೋಗಿದ್ದು, ಮತ್ತೆ ಹಲವು ರಾಷ್ಟ್ರಗಳು ಲಾಕ್ ಡೌನ್ ಮೊರೆ ಹೋಗಿವೆ.

ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿದ್ದಂತೆ ಭಾರತ ನಿಧಾನವಾಗಿ ಅನ್ ಲಾಕ್ ಗೆ ಮುಂದಾಗಿದ್ದರೇ, ವಿಶ್ವದಾದ್ಯಂತ ಅದಾಗಲೇ ಕೊರೋನಾ ಮೂರನೇ ಅಲೆ ಹಾಗೂ ಡೆಲ್ಟಾ ಪ್ಲಸ್ ವೈರಸ್ ಸೋಂಕಿನ ಭೀತಿ ತೀವ್ರಗೊಂಡಿದ್ದು, ಹಲವು ರಾಷ್ಟ್ರಗಳು ಮತ್ತೆ ಕಠಿಣ ಕ್ರಮ ಜರುಗಿಸಲು ಮುಂದಾಗುತ್ತಿವೆ.

ಕೊರೋನಾ ವೈರಸ್ ಸೋಂಕಿನ ಪ್ರಮಾಣ ತಗ್ಗಿದರೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಭಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಸಿಡ್ನಿಯಲ್ಲಿ 79 ಸಕ್ರಿಯ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಜುಲೈ 9 ರವರೆಗೆ ಸಿಡ್ನಿ ಲಾಕ್ ಮಾಡಲಾಗಿದೆ.

ಶುಕ್ರವಾರ ಒಂದೇ ದಿನ 32 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದ್ದು, ದಿನಬಳಕೆ ವಸ್ತುಗಳು, ವ್ಯಾಯಾಮ ಹಾಗೂ ಲಸಿಕೆ ಕಾರಣಕ್ಕೆ ಮನೆಯಿಂದ ಹೊರಕ್ಕೆ ಬರಲು ಅವಕಾಶ ನೀಡಲಾಗಿದೆ.

ಸಿಡ್ನಿ ಬಳಿಕ ಬಾಂಗ್ಲಾದೇಶದಲ್ಲೂ ಲಾಕ್ ಡೌನ್ ಜಾರಿಮಾಡಲಾಗಿದೆ. ಶುಕ್ರವಾರ ಬಾಂಗ್ಲಾದೇಶದಲ್ಲಿ 5,869 ಪ್ರಕರಣಗಳು ವರದಿಯಾಗಿದ್ದು, 108 ಸಾವಿನ ಸಂಖ್ಯೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರ ಒಂದು ವಾರದ ಲಾಕ್ ಡೌನ್ ಜಾರಿ ಮಾಡಿದೆ.

ಡೆಲ್ಟಾ ವೈರಸ್ ಅತ್ಯಂತ ವೇಗವಾಗಿ ಹರಡುವ ವೈರಸ್ ಎಂದು ವಿಶ್ವಸಂಸ್ಥೆ ಹೇಳಿದ್ದು, ಇದರ ಬೆನ್ನಲ್ಲೇ ವಿಶ್ವದ 85 ರಾಷ್ಟ್ರಗಳಲ್ಲಿ ಡೆಲ್ಟಾ ವೈರಸ್ ಪ್ರಕರಣಗಳು ವರದಿಯಾಗಿವೆ.