ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚುತ್ತಿದೆ. ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದಲೇ ಸ್ಟ್ಯಾಂಪಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ವಿದೇಶಗಳಿಂದ ಬರುವವರಿಂದಲೇ ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಆರೋಗ್ಯ ಇಲಾಖೆ ಏರ್ಪೋರ್ಟ್ಗಳಿಗೆ ಬರುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡರೆ ಅಂತವರನ್ನು ಐಸೋಲೇಷನ್ನಲ್ಲಿ ಇರಿಸಲಾಗುತ್ತಿದೆ. ಆದರೆ 14 ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದರೂ ಕೂಡ ಹೊರಗಡೆ ಸುತ್ತಾಡುತ್ತಿರೋದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ.

ಹೀಗಾಗಿ ಆರೋಗ್ಯ ಇಲಾಖೆ ಮಹಾರಾಷ್ಟ್ರ ಮಾದರಿಯಲ್ಲಿ ವಿದೇಶಗಳಿಂದ ಮರಳುವ ಪ್ರಯಾಣಿಕರ ಎಡಕೈಗೆ ಮುದ್ರೆಯನ್ನು ಹಾಕಲಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸ್ಟಾಂಪಿಂಗ್ ವ್ಯವಸ್ಥೆ ಜಾರಿಯಾಗಿದ್ದು, ಬೆಂಗಳೂರು ಏರ್ಪೋರ್ಟ್ಗೆ ವಿದೇಶಗಳಿಂದ ಬರುವ ಪ್ರಯಾಣಿಕರ ಎಡಗೈ ಹಿಂಭಾಗದಲ್ಲಿ ಸ್ಟಾಂಪ್ ಹಾಕಲಾಗುತ್ತಿದೆ. ಆ ಸ್ಟಾಂಪ್ನಲ್ಲಿ ಅವರು ಮನೆಯಲ್ಲಿ ಇರಬೇಕಾದ ಕೊನೆಯ ದಿನಾಂಕವನ್ನು ನಮೂದಿಸಲಾಗಿದೆ.

ಇದರಿಂದ ಒಂದು ವೇಳೆ ಶಂಕಿತರು ಹೊರಗೆ ಓಡಾಡಿದರೆ ಸಾರ್ವಜನಿಕರಿಗೆ ತಿಳಿದು, ಆರೋಗ್ಯ ಹೆಲ್ಪ್ಲೈನ್ಗೆ ಮಾಹಿತಿ ನೀಡಲು ಅನುಕೂಲವಾಗಲೆಂದು ಈ ರೀತಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಬಹುತೇಕ ಎಲ್ಲ ಕಡೆ ಕೊರೋನಾ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಿರುವುದರಿಂದ ಅಲ್ಲೂ ಸಿಕ್ಕಿಹಾಕಿಕೊಳ್ಳೋದು ಪಕ್ಕಾ ಎಂಬ ಕಾರಣಕ್ಕೆ ಈ ರೀತಿ ಮಾಡಲು ನಿರ್ಧರಿಸಲಾಗಿದೆ. ಶಂಕಿತರ ಬೇಜವಾಬ್ದಾರಿಯಿಂದ ಸೋಂಕು ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.