ಶತಾಯ ಗತಾಯ ರಾಜ್ಯ ಸರ್ಕಾರವನ್ನು ಮಣಿಸಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಿರುವ ಸಾರಿಗೆ ನೌಕರರು ಮುಷ್ಕರ ಆರಂಭಿಸಿ ವಾರವೇ ಕಳೆದಿದೆ. ಆದರೆ ಸರ್ಕಾರ ಮಾತ್ರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕಿಲ್ಲ. ಈ ಮಧ್ಯೆ ನಮ್ಮ ಕಷ್ಟ ನಿಮಗೂ ಗೊತ್ತು ನಮ್ಮನ್ನು ಬೆಂಬಲಿಸಿ ಎಂದು ಸಾರಿಗೆ ನೌಕರರು ರಾಕಿಂಗ್ ಸ್ಟಾರ್ ಗೆ ಪತ್ರ ಬರೆದಿದ್ದಾರೆ.

ಸಾರಿಗೆ ನೌಕರರು ತಮ್ಮ ಹೋರಾಟಕ್ಕೆ ಬೆಂಬಲಿಸುವಂತೆ ರಾಕಿಂಗ್ ಸ್ಟಾರ್ ಯಶ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ನಿಮ್ಮ ತಂದೆಯೂ ಸಾರಿಗೆ ನೌಕರರು. ಸಾರಿಗೆ ನೌಕರರ ಸಂಕಷ್ಟ ನಿಮಗೂ ಗೊತ್ತು. ಹೀಗಾಗಿ ಬನ್ನಿ ನಮ್ಮ ಹೋರಾಟಕ್ಕೆ ಕೈ ಜೋಡಿಸಿ. ಸರ್ಕಾರಕ್ಕೆ ನಮ್ಮ ಕಷ್ಟವನ್ನು ಮನವರಿಕೆ ಮಾಡಿಸಿ ಎಂದು ಸಾರಿಗೆ ನೌಕರರು ಯಶ್ ಗೆ ಮನವಿ ಮಾಡಿದ್ದಾರಂತೆ.

ಸಾರಿಗೆ ನೌಕರರು ಸಹಿಮಾಡಿದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 6 ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ರಾಜ್ಯದಾದ್ಯಂತ ಸಾರಿಗೆ ಹಾಗೂ ಬಿಎಂಟಿಸಿ ನೌಕರರು ಮುಷ್ಕರ ಆರಂಭಿಸಿದ್ದು, 8 ದಿನ ಕಳೆದಿದೆ. ಆದರೆ ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಕ್ಯಾರೇ ಎಂದಿಲ್ಲ.

ಕೆಲವೆಡೆ ಖಾಸಗಿ ಬಸ್ ಸಂಚರಿಸಲು ಅವಕಾಶ ಕಲ್ಪಿಸಲಾಗಿದ್ದರೇ, ಇನ್ನು ಕೆಲವೆಡೆ ಕೆಲ ಸಾರಿಗೆ ನೌಕರರು ಹಾಗೂ ತರಬೇತಿ ನಿರತರೇ ವಾಹನ ಓಡಿಸುತ್ತಿದ್ದಾರೆ. ಹೀಗಾಗಿ ಮುಷ್ಕರಕ್ಕೆ ಇನ್ನಷ್ಟು ತೀವ್ರತೆ ತರಲು ಮುಂದಾಗಿರುವ ಮುಷ್ಕರ ನಿರತರು ಯಶ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಆದರೆ ಇದುವರೆಗೂ ಯಶ್ ಸಾರಿಗೆ ಇಲಾಖೆ ನೌಕರರು ತಮ್ಮನ್ನು ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿರೋದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪತ್ರ ನಿಜವೋ ಅಥವಾ ಸುಳ್ಳು ಸುದ್ದಿಯೋ ಎಂಬುದು ಖಚಿತವಾಗಿಲ್ಲ.

ರಾಕಿಂಗ್ ಸ್ಟಾರ್ ಯಶ್ ತಂದೆಯವರು ಬಿಎಂಟಿಸಿ ನೌಕರರಾಗಿದ್ದು, ಈ ನಿವೃತ್ತ ಜೀವನ ನಡೆಸುತ್ತಿದ್ದಾರೆ.