ಕೊರೋನಾ ಸಂಕಷ್ಟದಿಂದ ಎಲ್ಲ ಉದ್ಯಮಗಳು ನೆಲಕಚ್ಚಿದ್ದು, ಸಿನಿಮಾ ರಂಗವೂ ಇದಕ್ಕೆ ಹೊರತಲ್ಲ. ಲಾಕ್ ಡೌನ್ ನಿಂದ ಸಮಸ್ಯೆಗೊಳಗಾದ ನಟನೊಬ್ಬ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಫೇಸ್ ಬುಕ್ ಲೈವ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನಟನನ್ನು ಸ್ನೇಹಿತರು ರಕ್ಷಿಸಿದ್ದಾರೆ.

ನಟನೆಯನ್ನೇ ವೃತ್ತಿಯನ್ನಾಗಿ ತೆಗೆದುಕೊಂಡಿದ್ದ ಬೆಂಗಾಳಿ ನಟ ಸುವೋ ಚಕ್ರವರ್ತಿ ಕೊರೋನಾ ಲಾಕ್ ಡೌನ್ ಕಂಗೆಟ್ಟು ಖಿನ್ನತೆಗೆ ಜಾರಿದ್ದರು. ಕೆಲಸ ವಿಲ್ಲದೇ ಬದುಕಲು ಆದಾಯವಿಲ್ಲದಂತಾಗಿರೋದರಿಂದ ನೊಂದ ಸುವೋ ಚಕ್ರವರ್ತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಾನು ಹೋಗುತ್ತಿದ್ದೇನೆ ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ ಸುವೋ ಚಕ್ರವರ್ತಿ, ಲೈವ್ ಬಂದಿದ್ದು, ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ನನಗೆ ಬದುಕಲು ಇಷ್ಟವಿಲ್ಲ. ನಾನು ಸಾಯುತ್ತೇನೆ ಎಂದು ಹೇಳಿದ್ದಲ್ಲದೇ ಲೈವ್ ನಲ್ಲೇ ನಿದ್ದೆ ಮಾತ್ರೆ ಸೇವಿಸಿದ್ದಾರೆ.

ತಕ್ಷಣ ಪೊಲೀಸರ ಸಹಾಯದಿಂದ ಆತನನ್ನು ರಕ್ಷಿಸಲು ಮುಂದಾದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ನನ್ನ ಮಗ 31 ವರ್ಷದ ನಿರುದ್ಯೋಗಿ ಎಂದು ಅಮ್ಮ ಕೊರಗುತ್ತಾರೆ. ಕಳೆದ ವರ್ಷ ಅಪ್ಪ ತೀರಿಕೊಂಡರು. ಬದುಕಲು ಆದಾಯವಿಲ್ಲ. ಅಪ್ಪನ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇವೆ ಎಂದು ಸುವೋ ಚಕ್ರವರ್ತಿ ಲೈವ್ ನಲ್ಲಿ ತಮ್ಮ ಸಂಕಷ್ಟ ಹಂಚಿಕೊಂಡಿದ್ದಾರೆ.

ಕಟ್ಟಡದಿಂದ ಜಿಗಿಯುವುದು, ಕೈ ನರ ಕತ್ತರಿಸಿಕೊಳ್ಳುವುದು ಇಂತಹ ಹಿಂಸಾತ್ಮಕ ಆತ್ಮಹತ್ಯೆ ಮಾರ್ಗ ನನಗೆ ಇಷ್ಟವಿಲ್ಲ. ಅದಕ್ಕಾಗಿ ನಾನು ನಿದ್ದೆ ಮಾತ್ರೆ ಸೇವಿಸಿದ್ದೇನೆ. ಇದರಿಂದ ಅಧಿಕರಕ್ತದೊತ್ತಡ ಉಂಟಾಗಿ ನಾನು ಸಾಯುತ್ತೇನೆ ಎಂದು ಸುವೋ ಹೇಳಿಕೊಂಡಿದ್ದು, ಆತ ಆತ್ಮಹತ್ಯೆ ಪ್ರಯತ್ನಕ್ಕೆ ಮನೆಯಲ್ಲೇ ಯತ್ನಿಸಿದ್ದು, ಕುಟುಂಬದವರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.

ಬೆಂಗಾಳಿ ಹಲವು ಸಿನಿಮಾ ಹಾಗೂ ಕಿರುತೆರೆ ಶೋಗಳಲ್ಲಿ ನಟಿಸಿರುವ ಸುವೋ, ನಟನೆಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು.