ನವದೆಹಲಿ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ಏರಿಕೆಯಾಗಿದ್ದ ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ಪ್ರತೀ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ಗ್ರಾಹಕರಿಗೆ ಬರೆ ಎಳೆದಿದೆ.
ಜುಲೈ ತಿಂಗಳಿನಲ್ಲಿ 594 ರೂಪಾಯಿ ಇದ್ದ ಸಿಲಿಂಡರ್ ಬೆಲೆಯನ್ನು ಡಿಸೆಂಬರ್ ಆರಂಭದಲ್ಲಿಯೇ 50 ರೂಪಾಯಿ ಏರಿಕೆಯನ್ನು ಮಾಡಲಾಗಿತ್ತು. ಕೇಂದ್ರ ಸರಕಾರ ಇದೀಗ ಎಟಿಎಫ್ ಬೆಲೆಯಲ್ಲಿ ಶೇ.6.3 ರಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ಕರ್ನಾಟಕದಲ್ಲಿ ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆ 644 ರೂ.ಗಳಿಂದ 694 ರೂಪಾಯಿಗೆ ಏರಿಕೆಯಾದಂತಾಗಿದೆ. ಇನ್ನು ದೆಹಲಿಯಲ್ಲಿ ಕಳೆದೊಂದು ವರ್ಷದಲ್ಲಿ ಸಿಲಿಂಡರ್ ದರದಲ್ಲಿ ಬರೋಬ್ಬರಿ 147 ರೂಪಾಯಿ ಏರಿಕೆಯಾದಂತಾಗಿದೆ.
ದೇಶದಲ್ಲಿ ಪ್ರತೀ ಕುಟುಂಬಗಳು ವಾರ್ಷಿಕವಾಗಿ ಗರಿಷ್ಟ 12 ಎಲ್ ಪಿಜಿ ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಕಳೆದೆರಡು ತಿಂಗಳಿನಿಂದಲೂ ಪದೇ ಪದೇ ಗ್ಯಾಸ್ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಗ್ರಾಹಕರನ್ನು ಸಂಕಷ್ಟಕ್ಕೆ ನೂಕಿದೆ.