ಬಿಗ್ ಬಾಸ್ ಕನ್ನಡ ಸೀಸನ್ 8 ರ ಎರಡನೇ ಇನ್ನಿಂಗ್ಸ್ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಮುನಿಸು,ಅಸಮಧಾನ,ಕದನ ನಡೆಯುತ್ತಲೇ ಇದೆ. ಚಂದ್ರಚೂಡ್ ಮಂಜು ಬಳಿಕ ಇದೀಗ ಅರವಿಂದ್ ಹಾಗೂ ನಿಧಿ ಫೈಟ್ ಜೋರಾಗಿದ್ದು, ಆಕ್ಷೇಪಾರ್ಹ ಪದ ಬಳಕೆ ಸೇರಿದಂತೆ ಹಲವು ಸಂಗತಿಗಳು ಭರ್ಜರಿ ಜಗಳಕ್ಕೆ ವೇದಿಕೆ ಒದಗಿಸಿದೆ.

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನ ಪ್ರತಿದಿನವೂ ಒಂದಿಲ್ಲೊಂದು ಜಗಳ ನೋಡೋದು ಪ್ರೇಕ್ಷಕರ ಭಾಗ್ಯದಲ್ಲಿರುವಂತಿದೆ. ಚಂದ್ರಚೂಡ್-ಮಂಜು ಜಗಳದ ಬಳಿಕ ಟಾಸ್ಕ್ ವಿಚಾರದಲ್ಲಿ ಅರವಿಂದ್ ಹಾಗೂ ನಿಧಿ ಕಿತ್ತಾಡಿಕೊಂಡಿದ್ದು, ಕ್ರೀಡಾ ಹಿನ್ನೆಲೆಯಿಂದ ಬಂದಿದ್ದರೂ ಅರವಿಂದ್ ಗೆ ಕ್ರೀಡಾಸ್ಪೂರ್ತಿ ಹಾಗೂ ಸೋಲನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ನಿಧಿ ಕಿಡಿಕಾರಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸದಸ್ಯರನ್ನು ಸೂರ್ಯ ಸೇನಾ ಹಾಗೂ ಕ್ವಾಟ್ಲೆ ಕಿಲಾಡಿಗಳು ಎಂದು ಎರಡು ತಂಡ ಮಾಡಲಾಗಿದ್ದು, ಸೂರ್ಯಸೇನಾ ತಂಡದ ಕ್ಯಾಪ್ಟನ್ ಆಗಿ ಅರವಿಂದ್ ಹಾಗೂ ಕ್ವಾಟ್ಲೆ ಕಿಲಾಡಿ ತಂಡದ ಕ್ಯಾಪ್ಟನ್ ಆಗಿ ಮಂಜು ನೇಮಕವಾಗಿದ್ದಾರೆ.

ಈ ತಂಡಗಳಿಗೆ ಬಿಗ್ ಬಾಸ್ ಟಿಶ್ಯೂ ರೋಲ್ ಜೋಡಿಸುವ ಟಾಸ್ಕ್ ನೀಡಿದ್ದು, ಟಾಸ್ಕ್ ವೇಳೆ ಅರವಿಂದ್ ಹಾಗೂ ಮಂಜು ನಡುವೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಮಂಜು ಪರವಾಗಿ ಮಾತನಾಡಲು ನಿಧಿ ಬಂದರು. ಅದಕ್ಕೆ ಅರವಿಂದ್ ಆಕ್ಷೇಪಾರ್ಹ ಪದ ಬಳಸಿ ಸುಮ್ಮನಿರುವಂತೆ ಸೂಚಿಸಿದರು. ‘

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಿಧಿ, ಸ್ಪೋರ್ಟ್ಸ್ ಹಿನ್ನೆಲೆಯಿಂದ ಬಂದಿದ್ದರೂ ಅರವಿಂದ್ ಗೆ ಕ್ರೀಡಾ ಸ್ಪೂರ್ತಿ ಇಲ್ಲ. ಸೋಲನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲ. ಯಾವಾಗಲೂ ತಾವೇ ಗೆಲ್ಲಬೇಕೆಂದು ಬಯಸುತ್ತಾರೆ ಎಂದು ಟೀಕಿಸಿದ್ದಾರೆ.

ಬಳಿಕ ತಾವಾಡಿದ ಮಾತು ಸರಿಯಲ್ಲ ಎಂದು ಅರಿತ ನಿಧಿ ಬಳಿ ಕ್ಷಮೆ ಕೇಳಲು ಮುಂದಾದರೂ ನಿಧಿ ಮಾತ್ರ ತಮ್ಮ ಆಕ್ರೋಶ, ಸಿಟ್ಟು ಬಿಟ್ಟುಕೊಡಲು ಸಿದ್ಧವಾಗಲಿಲ್ಲ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಹೈಡ್ರಾಮಾ ನಡೆಯುತ್ತಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ.