ಚಿಕ್ಕಮಗಳೂರು : ಕಳೆದೊಂದು ವಾರದಿಂದಲೂ ಬಂದ್ ಆಗಿದ್ದ ಚಾರ್ಮಾಡಿಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಆರಂಭಗೊಂಡಿದೆ. ಮಣ್ಣು ಕುಸಿತದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇಲಾಗಿತ್ತು. ಆದ್ರೀಗ ಕೇವಲ ಲಘುವಾಹನ ಸಂಚಾರಕ್ಕೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ.

ಮಲೆನಾಡಿನ ಭಾಗಗಳಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿತವಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಅಗಸ್ಟ್ 11ರ ವರೆಗೂ ವಾಹನ ಸಂಚಾರಕ್ಕೆ ನಿರ್ಬಂಧವನ್ನು ಹೇರಿತ್ತು. ಎಲ್ಲಾ ವಾಹನಗಳು ಶಿರಾಡಿ ಘಾಟ್ ಮಾರ್ಗವಾಗಿ ಸಂಚರಿಸುವಂತೆಯೂ ಸೂಚಿಸಲಾಗಿತ್ತು.

ಇದೀಗ ಚಿಕ್ಕಮಗಳೂರು ಜಿಲ್ಲಾಡಳಿತ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿದ್ದು, ಇಂದಿನಿಂದ ವಾಹನ ಸಂಚಾರ ಆರಂಭಗೊಂಡಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಕೇವಲ ಲಘವಾಹನ ಸಂಚಾರಕಕೆ ಮಾತ್ರವೇ ಅವಕಾಶವನ್ನು ನೀಡಲಾಗುತ್ತಿದೆ.


ರಸ್ತೆಯಲ್ಲಿ ಕುಸಿದಿರುವ ಮಣ್ಣನ್ನು ತೆರವು ಮಾಡಲಾಗಿದ್ದು, ಕೆಲವೆಡೆ ಕಾರ್ಯಾಚರಣೆ ನಡೆಯುತ್ತಿದೆ. ಮಾತ್ರವಲ್ಲ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಭೂ ಕುಸಿತದ ಆತಂಕವಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಮಾತ್ರವೇ ವಾಹನಗಳು ಸಂಚರಿಸಬಹುದಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.