ಕಾರವಾರ : 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ನಂಬಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಗರ ಮೂಲದ ಸಂತ್ರಸ್ತೆ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಬಾಲಕಿ ತನ್ನ ಸ್ನೇಹಿತೆಯ ಮನೆಗೆ ಆಗಾಗ ಬಂದು ಹೋಗುತ್ತಿದ್ದಳು. ಈ ನಡುವಲ್ಲೇ ಆರೋಪಿ ಶಿರಸಿ ಮೂಲದ ರವಿ ಪಟಗಾರ (35 ವರ್ಷ) ಎಂಬಾತನ ಜೊತೆಗೆ ಸ್ನೇಹ ಬೆಳೆದಿತ್ತು. ನಂತರದಲ್ಲಿ ಈತನ ಸ್ನೇಹಿತ ಶಿರಾಲಿಯ ಶಿವರಾಜು ನಾಯ್ಕ ಎಂಬವರು ಸೇರಿ ಅತ್ಯಾಚಾರವೆಸಗಿದ್ದರು.
ಬಾಲಕಿಯ ತಾಯಿ ರವಿ ಪಟಗಾರ ಎಂಬಾತನ ವಿರುದ್ದ ದೂರು ನೀಡಿದ್ದು, ಪೊಲೀಸರ ವಿಚಾರಣೆಯ ವೇಳೆಯಲ್ಲಿ ರವಿ ಪಟಗಾರ ಶಿವರಾಜ ನಾಯ್ಕನ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಇದೀಗ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಬಾಲಕಿಯನ್ನು ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗಿದ್ದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.