ಬೆಂಗಳೂರು : ಕೊರೊನಾ ವೈರಸ್ ಭೀತಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ರಾಜ್ಯಕ್ಕೂ ಕೊರೊನಾ ವೈರಸ್ ಕಾಲಿಟ್ಟಿದ್ದು, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ ಕಾರ್ಮಿಕ ಇಲಾಖೆ ಕೊರೊನಾ ವೈರಸ್ ಶಂಕಿತರಿಗೆ ವೇತನ ಸಹಿತ 28 ದಿನಗಳ ರಜೆ ನೀಡುವಂತೆ ಆದೇಶ ಹೊರಡಿಸಿದೆ.

ಕೊರೊನಾ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಸಿಲಿಕಾನ್ ಸಿಟಿಯ ಐಟಿ ಕಂಪೆನಿಗಳು ಸಿಬ್ಬಂಧಿಗಳಿಗೆ ರಜೆ ನೀಡಿವೆ. ಇನ್ನೂ ಹಲವು ಕಂಪೆನಿಗಳು ವರ್ಕ ಪ್ರಂ ಹೋಮ್ ಮಾಡುವಂತೆ ಸೂಚಿಸಿದೆ. ಇದೆಲ್ಲದರ ಬೆನ್ನಲ್ಲೇ ಕಾರ್ಮಿಕ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕಾರ್ಮಿಕ ಇಲಾಖೆ ಹೊರಡಿಸಿರೋ ಸುತ್ತೋಲೆಯ ಪ್ರಕಾರ ರಜೆ ಸಹಿತ 28 ದಿನ ರಜೆ ಕೊಡಲೇಬೇಕು. ಅಲ್ಲದೇ ಕೊರೊನಾ ವೈರಸ್ ಬಾಧಿತರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ಮತ್ತು ರಜೆ ನೀಡುವ ಕುರಿತು 4 ಅಂಶಗಳ ಮಾರ್ಗಸೂಚಿಗಳನ್ನ ಕಾರ್ಮಿಕ ಇಲಾಖೆ ಹೊರಡಿಸಿದೆ.

ಇಎಸ್‍ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು ತಮ್ಮ ಹತ್ತಿರದ ಇಎಸ್‍ಐ ಔಷಾಧಾಲಯ ಮತ್ತು ಆಸ್ಪತ್ರೆಗಳಿಗೆ ತೆರಳಿ ಸದರಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಪ್ರಮಾಣ ಪತ್ರ ಪಡೆಯಲು ಬರುವ ಕಾರ್ಮಿಕರಿಗೆ ಎಲ್ಲಾ ಇಎಸ್‍ಐ ವೈದ್ಯಾಧಿಕಾರಿಗಳು ತುರ್ತಾಗಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಬೇಕು. ಕಾರ್ಮಿಕರು ಪ್ರಮಾಣ ಪತ್ರವನ್ನು ಸಂಸ್ಥೆಯ ಆಡಳಿತ ಮಂಡಳಿಗೆ ನೀಡಬೇಕು. ಪ್ರಮಾಣ ಪತ್ರದ ಮೇಲೆ ಸಂಸ್ಥೆ 28 ದಿನ ಕಡ್ಡಾಯ ರಜೆ ನೀಡಬೇಕು. ಇಎಸ್‍ಐ ಅನ್ವಯವಾಗದೇ ಇರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಕೊರೊನಾ ವೈರಸ್ ಬಾಧಿತರಾದಲ್ಲಿ ಅವರಿಗೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15 ರ ಅನ್ವಯ ತಕ್ಷಣ 28 ದಿನ ವೇತನ ಸಹಿತ ರಜೆ ನೀಡಬೇಕು ಅಂತ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಈ ಎಲ್ಲಾ ಅಂಶಗಳನ್ನ ಆಯಾ ಜಿಲ್ಲಾಧಿಕಾರಿಗಳು ಅನುಷ್ಠಾನ ಮಾಡಲು ಕಾರ್ಮಿಕ ಇಲಾಖೆ ಸೂಚನೆ ನೀಡಿದೆ.