ನವದೆಹಲಿ: ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದು ಟೆಸ್ಟ್ ಗಾಗಿ ಆಸ್ಪತ್ರೆಗೆ ಅಲೆದಾಡುವ ಆತಂಕದಲ್ಲಿರೋ ಸಕ್ರಿಯ ಸಂಪರ್ಕಿತರಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಿಹಿಸುದ್ದಿ ನೀಡಿದೆ. ಮನೆಯಲ್ಲೇ ಹೋಂ ಟೆಸ್ಟಿಂಗ್ ಕಿಟ್ ಬಳಸಲು ಅನುಮತಿ ನೀಡಿದೆ.

ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನ್ನು ಮನೆಯಲ್ಲೇ ಮಾಡಲು ಆಯ್ಸಿಎಂಆರ್ ಅನುಮತಿ ನೀಡಿದೆ. ಕೊರೋನಾ ಸೋಂಕು ದೃಢಪಟ್ಟ ರೋಗಿಗಳ ಸಂಪರ್ಕಕ್ಕೆ ಬಂದವರು ಇನ್ಮುಂದೆ ಸೋಂಕಿನ ಪರೀಕ್ಷೆಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲೇ ಟೆಸ್ಟ್ ಮಾಡಿಕೊಳ್ಳಬಹುದು.
ಒಂದೊಮ್ಮೆ ಮನೆಯಲ್ಲೇ ಮಾಡಿದ ಟೆಸ್ಟ್ ನಲ್ಲಿ ಪಾಸಿಟಿವ್ ಬಂದ್ರೇ ಅದನ್ನೇ ಪರಿಗಣಿಸಿ ಚಿಕಿತ್ಸೆ ಹಾಗೂ ಐಸೋಲೇಶನ್ ನಿಯಮ ಪಾಲಿಸಬೇಕು. ಒಂದೊಮ್ಮೆ ಕೊರೋನಾ ಲಕ್ಷಣಗಳಿದ್ದು, ರ್ಯಾಪಿಡ್ ಆಂಟಿಜನ್ ಟೆಸ್ಟ್ ನಲ್ಲಿ ನೆಗೆಟಿವ್ ಇದ್ದರೇ, ಅಂತವರು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ಆಯ್ಸಿಎಂಆರ್ ಹೇಳಿದೆ.

ಅಲ್ಲದೇ ಒಂದೊಮ್ಮೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದ್ರೇ ಮತ್ತೆ ಅಂತಹ ಪ್ರಕರಣಗಳನ್ನು ಮರಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಮಂಡಳಿ ಹೇಳಿದೆ. ಆದರೆ ವರದಿ ನೆಗೆಟಿವ್ ಬಂದರೂ ಕೆಲದಿನಗಳ ಕಾಲ ಸಕ್ರಿಯ ರೋಗಿಗಳ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕೆ ಬಳಸಿ ಐಸೋಲೇಟೆಡ್ ಆಗಿರುವುದು ಉತ್ತಮ ಎಂದು ಮಂಡಳಿ ಅಭಿಪ್ರಾಯಿಸಿದೆ.

ಇನ್ನು ಮನೆಯಲ್ಲಿ ಕೊರೋನಾ ಟೆಸ್ಟ್ ಮಾಡಲು ಅಧಿಕೃತ ಮತ್ತು ಸೂಕ್ತ ಬಳಕೆದಾರರ ಕೈಪಿಡಿ, ಮಾಹಿತಿ ಉಳ್ಳ ಹೋಂ ಟೆಸ್ಟಿಂಗ್ ಕಿಟ್ ನ್ನು ಬಳಸಬೇಕು. ಅಲ್ಲದೇ ಸೂಕ್ತ ಮಾರ್ಗದರ್ಶನದ ಜೊತೆಗೆ ಬಳಸಬೇಕು ಎಂದು ಆಯ್ಸಿಎಂರ್ ಸೂಚಿಸಿದೆ.
