ಬೆಂಗಳೂರು : ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಆದೇಶವನ್ನು ಮೇ ಅಂತ್ಯದ ವರೆಗೂ ವಿಸ್ತರಣೆ ಮಾಡಿ. ಹೆಚ್ಚಿನ ಸಡಿಲಿಕೆ ಬೇಡವೇ ಬೇಡಾ. ಅಲ್ಲದೇ ವಿಮಾನ, ರೈಲು ಸಂಚಾರ, ಮಾಲ್, ಸಿನಿಮಾ ಥಿಯೇಟರ್ ಆರಂಭಿಸೋದು ಬೇಡಾ.. ಹೀಗಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. 4ನೇ ಹಂತದ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ ? ಬೇಡವೇ ಅನ್ನುವ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮ್ಯಾರಥಾನ್ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸ್ಥಿತಿಗತಿಗಳ ಕುರಿತು ವಿವರಣೆ ನೀಡಿದ್ದಾರೆ. ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಆದ್ರೂ ರಾಜ್ಯದ ಗ್ರೀನ್ ಝೋನ್ ಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಹೀಗಾಗಿ ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಆದೇಶವನ್ನು ಮೇ ಅಂತ್ಯದ ವರೆಗೂ ಮುಂದುವರಿಸಬೇಕು. ಜೊತೆಗೆ ಹೆಚ್ಚಿನ ಸಡಿಲಿಕೆಯನ್ನು ನೀಡುವುದು ಬೇಡ ಎಂದಿದ್ದಾರೆ.

ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ದೇಶೀಯ ವಿಮಾನಗಳ ಹಾರಾಟ ಬೇಡ. ಅದ್ರಲ್ಲೂ ಬೆಂಗಳೂರಿಗೆ ವಿಮಾನ ಸೇವೆಯನ್ನು ಆರಂಭಿಸುವುದೇ ಬೇಡ. ಅಲ್ಲದೇ ರೈಲ್ವೆ ಸಂಚಾರವನ್ನು ಆರಂಭಿಸುವುದು ಬೇಡ. ಮಾಲ್ ಹಾಗೂ ಥಿಯೇಟರ್ ಗಳು ಬಂದ್ ಆಗಿರಲಿ ಎಂದಿದ್ದಾರೆ. ಜನರ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳನ್ನು ತೆರೆಯಲು ಅನುಮತಿಯನ್ನು ನೀಡಬೇಕು. ಈಗ ಇರುವ ಗ್ರೀನ್, ಆರೆಂಜ್ ಹಾಗೂ ರೆಡ್ ಝೋನ್ ಗಳನ್ನು ತೆಗೆದು ಕೇವಲ ಕಂಟೈನ್ಮೆಂಟ್ ಝೋನ್ ಗಳು ಮಾತ್ರವೇ ಇರಲಿ ಎಂದು ಮೋದಿ ಅವರಿಗೆ ಮನವಿ ಮಾಡಿದ್ದಾರೆ.