ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಒಂದೇ ದಿನ ರಾಜ್ಯದಲ್ಲಿ 36 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿಗೆ ಬೆಂಗಳೂರಲ್ಲಿ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ.

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ ಬರೋಬ್ಬರಿ 17 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಅಲ್ಲದೇ ಕೊರೊನಾ ಮೊದಲ ಬಲಿ ಪಡೆದಿದ್ದ ಕಲಬುರಗಿ ಜಿಲ್ಲೆಯಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದು, ಇಂದು ಮತ್ತೆ 9 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಅಲ್ಲದೇ ವಿಜಯಪುರದಲ್ಲಿ 7 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ರೆ, ಮೈಸೂರಿನಲ್ಲಿ 3 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದ್ಲಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 315ಕ್ಕೆ ಏರಿಕೆಯಾಗಿದೆ.

ಮಾತ್ರವಲ್ಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 66 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಹೀಗಾಗಿ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.