ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು, ರಾಜ್ಯದ ಶಾಲಾ ಶಿಕ್ಷಕರ ರಜೆಯ ಅವಧಿಯನ್ನು ಎಪ್ರಿಲ್ 11ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ಮಾರ್ಚ್ 31ರ ವರೆಗೆ ಶಾಲಾ ಶಿಕ್ಷಕರಿಗೆ ರಜೆ ಘೋಷಿಸಲಾಗಿತ್ತು. ಆದರೆ ಕೇಂದ್ರ ಸರಕಾರ ಎಪ್ರಿಲ್ 14ರ ವರೆಗೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಎಪ್ರಿಲ್ 14 ರವರೆಗೆ ಲಾಕ್ ಡೌನ್ ಆದೇಶ ಹೊರಿಡಿಸಿದ್ದು, ಶಿಕ್ಷಕರ ರಜೆಯ ಅವಧಿಯನ್ನು ಎಪ್ರಿಲ್ 11ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಹಲವು ಶಾಲೆಗಳು ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿವೆ. ಇದರಿಂದಾಗಿ ಪೋಷಕರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಶಾಲೆಗಳ ಪ್ರವೇಶ ಪ್ರಕ್ರಿಯೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಶಾಲೆಗಳು ಪೋಷಕರಿಂದ ಶುಲ್ಕ ವಸೂಲಿ ಮಾಡುವಂತಿಲ್ಲ. ಶುಲ್ಕ ವಸೂಲಿಗೆ ಡೆಡ್ ಲೈನ್ ವಿಧಿಸುವಂತಿಲ್ಲ. ಮುಂದಿನ ಆದೇಶದವರೆಗೂ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಲಾಗಿದ್ದು, ಸರಕಾರದ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.