ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ 4.0 ಆದೇಶ ಜಾರಿಯಲ್ಲಿದೆ. ಲಾಕ್ ಡೌನ್ ನಡುವಲ್ಲೇ ದೇಶಿಯ ವಿಮಾನಗಳ ಹಾರಾಟ ಆರಂಭಗೊಂಡಿದೆ. ಆದ್ರೆ ಪ್ರಯಾಣಿಕರ ಕೊರತೆಯಿಂದಾಗಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿವಿಧ ವಿಮಾನಗಳ ಹಾರಾಟವನ್ನೇ ರದ್ದುಗೊಳಿಸಲಾಗಿದೆ.

ದೇಶಿಯ ವಿಮಾನಯಾನ ಸೇವೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಚೆನೈ ಹಾಗೂ ದೆಹಲಿಯಿಂದ ವಿಮಾನಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದವು. ಆದರೆ ವಿಮಾನಗಳಲ್ಲಿ ಪ್ರಯಾಣಿಕರ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲೀಗ ಬೆಂಗಳೂರು ವಿಮಾನ ನಿಲ್ದಾಣದಿಂದ ಇತರ ರಾಜ್ಯಗಳಿಗೆ ತೆರಳಬೇಕಾಗಿರುವ ಸುಮಾರು 20 ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.

ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರ ಕೊರತೆಯಿಂದ ಮಂಗಳೂರು – ಬೆಂಗಳೂರು ವಿಮಾನ ಸೇವೆ ಹೊರತು ಪಡಿಸಿ, ಮಂಗಳೂರು ಚೆನೈ, ಮಂಗಳೂರು -ಮುಂಬೈ, ಮಂಗಳೂರು -ದೆಹಲಿ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಸಂಜೆ 7.30ಕ್ಕೆ ಹಾಗೂ ರಾತ್ರಿ 9.30ಕ್ಕೆ ತೆರಳಬೇಕಾಗಿರುವ ಮಂಗಳೂರು – ಬೆಂಗಳೂರು ವಿಮಾನ ಹಾರಾಟ ನಡೆಸಲಿದೆ.

ಈಗಾಗಲೇ ಹೊರ ರಾಜ್ಯಗಳಿಂದ ಆಗಮಿಸಿದ್ದ ಪ್ರಯಾಣಿಕರನ್ನು ಒಂದು ವಾರಗಳ ಕಾಲ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಏಳು ದಿನಗಳ ಬಳಿಕ ಆರೋಗ್ಯ ತಪಾಸಣೆಗೆಯನ್ನು ನಡೆಸಿ ನಂತರದಲ್ಲಿ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ರಾಜ್ಯದಲ್ಲಿ ಪಶ್ಚಿಮ ಬಂಗಾಲ ಹಾಗೂ ಆಂಧ್ರಪ್ರದೇಶ ಹೊರತು ಪಡಿಸಿ ಉಳಿದ ಕಡೆಗಳಿಗೆ ವಿಮಾನ ಸೇವೆ ಆರಂಭಗೊಂಡಿತ್ತು. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರ ವಿಮಾನಯಾನ ಸಂಸ್ಥೆಗಳಿಗೆ ಸೂಚನೆಯನ್ನು ಕೊಟ್ಟಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಯಾಣಿಕರ ಆಸನ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ.