ಬ್ರಹ್ಮಾವರ : ಜ್ವರ ಬಂತು ಅಂತಾ ಅವರಿಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 6ನೇ ದಿನಕ್ಕೆ ಬಂದ ಕೊರೊನಾ ವರದಿ ಪಾಸಿಟಿವ್ ಆಗಿತ್ತು. ಕೋವಿಡ್ ವರದಿಯ ಜೊತೆಗೆ ಆಸ್ಪತ್ರೆಯ ಸಿಬ್ಬಂದಿ 5 ದಿನದ ಬಿಲ್ ನೀಡಿದ್ದರು. ಕೊರೊನಾ ಪಾಸಿಟಿವ್ ವರದಿಗಿಂತಲೂ ಆಸ್ಪತ್ರೆಯ ಬಿಲ್ ಅವರಿಬ್ಬರಿಗೂ ಆಘಾತವನ್ನು ತಂದಿತ್ತು.

ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಕಳೆದ 20 ದಿನಗಳ ಹಿಂದೆಯಷ್ಟೇ ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿರುವ ತನ್ನ ಅತ್ತೆಯ ಮನೆಗೆ ಬಂದಿದ್ದರು. ಮನೆಯಲ್ಲಿಯೇ ಇದ್ದ ವ್ಯಕ್ತಿಗೆ ಹಾಗೂ ಅತ್ತೆಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರಿಬ್ಬರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆಯಲ್ಲಿ ವೈದ್ಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ. ಜ್ವರ ಇದ್ದ ಕಾರಣಕ್ಕೆ ಇಬ್ಬರನ್ನೂ ಕೊರೊನಾ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ ಈ ನಡುವಲ್ಲೇ ಇಬ್ಬರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆದರೆ 6ನೇ ದಿನ ಬಂದ ಕೊರೊನಾ ತಪಾಸಣಾ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಆಸ್ಪತ್ರೆಯ ಸಿಬ್ಬಂದಿ ಸೋಂಕಿತರ ಮನೆಯವರಿಗೆ ಕರೆ ಮಾಡಿ ಕೊರೊನಾ ಸೋಂಕು ಇರುವುದನ್ನು ದೃಢಪಡಿಸಿದ್ದಾರೆ. ಅಲ್ಲದೇ ಇಬ್ಬರ ಆಸ್ಪತ್ರೆಯ ಬಿಲ್ 2.31 ಲಕ್ಷ ರೂಪಾಯಿ ಪಾವತಿಸಿ ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡುವಂತೆ ಹೇಳಿದ್ದಾರೆ. ಆಸ್ಪತ್ರೆಯ ಬಿಲ್ ಕೇಳಿದ ಮನೆಯವರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು. ಇಬ್ಬರನ್ನೂ ಒಂದೇ ವಾರ್ಡಿಗೆ ದಾಖಲು ಮಾಡಿದ್ದು, ಇಬ್ಬರಿಗೂ ಒಬ್ಬರೇ ಸಿಬ್ಬಂದಿ ನೋಡಿಕೊಳ್ಳುತ್ತಿದ್ದರೂ ಕೂಡ ಕೇವಲ 5 ದಿನಕ್ಕೆ ಒಬ್ಬೊಬ್ಬರಿಂದ ತಲಾ ಪಿಪಿಇ ಕಿಟ್ ಗೆ 57,600 ರೂಪಾಯಿ ಹಾಗೂ ಮಾಸ್ಕ್ ಗೆ 9,600 ರೂಪಾಯಿಯನ್ನು ವಸೂಲಿ ಮಾಡಲಾಗಿದೆ.

ಅಲ್ಲದೇ ಮೆಡಿಸಿನ್ ಚಾರ್ಜ್, ಅಂಬುಲೆನ್ಸ್ ಚಾರ್ಜ್, ಕೊರೊನಾ ತಪಾಸಣೆ ಸೇರಿ ಬರೋಬ್ಬರಿ 2,31,860 ರೂಪಾಯಿ ಬಿಲ್ ಮಾಡಲಾಗಿತ್ತು. ಕೊರೊನಾ ವೈರಸ್ ಸೋಂಕಿನ ಆರ್ಭಟದಿಂದ ತತ್ತರಿಸಿರೋ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸೋದು ಅಸಾಧ್ಯ. ಅದ್ರಲ್ಲೂ ಆಸ್ಪತ್ರೆಯ ಸಿಬ್ಬಂದಿ ನೀಡಿದ ಬಿಲ್ ನೋಡಿದ್ರೆ ಎಂತವರಿಗೂ ಶಾಕ್ ಆಗದೇ ಇರದು. ಕೊರೊನಾ ಸೋಂಕು ಇಲ್ಲದ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಕಾರ್ಯವನ್ನು ಆಸ್ಪತ್ರೆಗಳು ಮಾಡುತ್ತಿವೆ.

ಖಾಸಗಿ ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ ಓರ್ವ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ರೂ ಕೂಡ ಸಿಬ್ಬಂದಿ ಬಳಸುವ ಪಿಪಿಇ ಕಿಟ್, ಮಾಸ್ಕ್ ದರವನ್ನು ಪ್ರತೀ ರೋಗಿಯಿಂದಲೂ ವಸೂಲಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯ ಹಣದ ದಾಹಕ್ಕೆ ಜನರು ನಿಜಕ್ಕೂ ತತ್ತರಿಸಿ ಹೋಗಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾದ ಲಾಕ್ ಡೌನ್ ನಿಂದ ಜನರು ಆರ್ಥಿಕವಾಗ ಜರ್ಜರಿತರಾಗಿದ್ದಾರೆ. ಕೊನೆಗೆ ಎಚ್ಚೆತ್ತ ಜಿಲ್ಲಾಡಳಿತ ಸೋಂಕಿತರನ್ನು ಮಹೇಶ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸುವುದಾಗಿ ಹೇಳಿದ್ದು, ಕೊರೊನಾ ದೃಢಪಟ್ಟ ನಂತರದ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದಿದ್ದಾರೆ. ಆದರೆ ಕೊರೊನಾ ಸೋಂಕು ದೃಢಪಡುವ ಮೊದಲ 5 ದಿನದ ಬಿಲ್ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ.

ಉಡುಪಿ ಶಾಸಕ ರಘುಪತಿ ಭಟ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ತನಿಖೆ ನಡೆಸಿ ಆಸ್ಪತ್ರೆಯ ವಿರುದ್ದ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಬಡವರಿಂದ ವಸೂಲಿಗೆ ಇಳಿದಿವೆ. ಇಂತಹ ಆಸ್ಪತ್ರೆಗಳ ವಿರುದ್ದ ಜಿಲ್ಲಾಡಳಿತ ಹಾಗೂ ಸರಕಾರ ಕ್ರಮಕೈಗೊಳ್ಳಬೇಕಿದೆ.