ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಅಲ್ಲದೇ ಸರಕಾರಿ ನೌಕರರಿಗೆ ಇನ್ಮುಂದೆ ವಾರದಲ್ಲಿ 5 ದಿನಗಳ ಕಾಲ ಮಾತ್ರವೇ ಕೆಲಸ ನಿರ್ವಹಿಸಬೇಕಾಗಿದೆ. ರಾಜ್ಯ ಸರಕಾರ ಇಂತಹದ್ದೊಂದು ನಿಯಮವನ್ನು ಜಾರಿಗೆ ತರಲು ಮುಂದಾಗಿದ್ದು ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.

ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಪರ್ಯಾಯ ಮಾರ್ಗಗಳನ್ನು ಕೈಗೊಳ್ಳಲು ಮುಂದಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡುವುದೇ ಇಲ್ಲಾ ಎಂದಿರುವ ಸರಕಾರ ಇದೀಗ ವೀಕೆಂಡ್ ಲಾಕ್ ಡೌನ್ ಜಾರಿಗೆ ಮುಂದಾಗಿದೆ. ಪ್ರತಿನಿತ್ಯ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಲಾಕ್ ಡೌನ್ ಜಾರಿಯಾಗಲಿದೆ. ಅಲ್ಲದೇ ರಾಜ್ಯದಲ್ಲಿ ಪ್ರತೀ ಭಾನುವಾರ ಸಂಪೂರ್ಣವಾಗಿ ಲಾಕ್ ಡೌನ್ ಆದೇಶವನ್ನು ಜಾರಿ ಮಾಡಲಾಗುತ್ತಿದೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ತಜ್ಞರು ಶನಿವಾರ ಹಾಗೂ ಭಾನುವಾರದಂದು ಲಾಕ್ ಡೌನ್ ಹೇರಿಕೆ ಮಾಡುವ ಕುರಿತು ಸಲಹೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳ ಕಾಲ ಲಾಕ್ ಡೌನ್ ಹೇರಿಕೆ ಮಾಡುವುದಕ್ಕೆ ಒಪ್ಪಿಗೆಯನ್ನು ಸೂಚಿಸಿಲ್ಲ. ಆರಂಭದಲ್ಲಿ ಕೇವಲ ಭಾನುವಾರದ ಮಾತ್ರ ಲಾಕ್ ಡೌನ್ ಜಾರಿಗೆ ತರಬಹುದು ಎಂದು ಸೂಚನೆಯನ್ನು ನೀಡಿದ್ದಾರೆ. ಈ ಕುರಿತು ಸಿಎಂ ಯಡಿಯೂರಪ್ಪ ಸೋಮವಾರ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಬರುತ್ತಿರುವುದರಿಂದ ಕೊರೊನಾ ಸೋಂಕಿನ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಸರಕಾರಿ ಕಚೇರಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ರಾಜ್ಯ ಸರಕಾರ ದಿಟ್ಟ ಕ್ರಮವನ್ನು ಕೈಗೊಂಡಿದೆ. ಸರಕಾರಿ ಕಚೇರಿ ನೌಕರರಿಗೆ ಶನಿವಾರ ಹಾಗೂ ಭಾನುವಾರದ ರಜೆ ನೀಡಲು ರಾಜ್ಯ ಸರಕಾರ ಮುಂದಾಗಿದೆ. ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು, ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕೂಡ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗದ ಸಂದಿಗ್ದತೆಗೆ ರಾಜ್ಯ ಸರಕಾರ ಸಿಲುಕಿದೆ. ಹೀಗಾಗಿ ಜುಲೈ 5ರಿಂದ ರಾಜ್ಯದಲ್ಲಿ ಹೊಸ ನಿಯಮಗಳನ್ನು ಜಾರಿಗೆ ಬರಲಿದ್ದು, ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.