ಮಂಗಳೂರು : ಕರಾವಳಿಯಲ್ಲೀಗ ವೈರಸ್ ಸೋಂಕು ರಣಕೇಕೆ ಹಾಕುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ತತ್ತರಿಸಿ ಹೋಗುವಂತೆ ಮಾಡುತ್ತಿದೆ. ಬರೋಬ್ಬರಿ 3 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತತ್ತರಿಸಿದ್ದಾರೆ. ಈ ನಡುವಲ್ಲೇ ಖಾಸಗಿ ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದು, ಜನರಿಂದ ಲಕ್ಷಾಂತರ ರೂಪಾಯಿ ಸುಲಿಗೆಗೆ ಇಳಿದಿವೆ. ಆದ್ರೆ ಆಸ್ಪತ್ರೆಗಳ ಜೊತೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಮೀಲಾಗಿದೆ ಅನ್ನುವ ಆರೋಪ ಕೇಳಿಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಮರಣ ಮೃದಂಗವನ್ನು ಬಾರಿಸುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಬರೊಬ್ಬರಿ 3.003 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದುವರೆಗೆ 1,278 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ 1,725 ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಬರೊಬ್ಬರಿ 311 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ರಾಂಡಮ್ ಟೆಸ್ಟ್ ನಡೆಸುತ್ತಿರುವ ಕಡೆಗಳಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವುದು ಆತಂಕವನ್ನು ಮೂಡಿಸಿದೆ.

ಒಂದೆಡೆ ಕೊರೊನಾ ಸೋಂಕು ಮಿತಿಮೀರುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಇದನ್ನೇ ಬಂಡವಾಳ ಮಾಡಿಕೊಂಡು ಬಡವರ ರಕ್ತ ಹೀರುವುದಕ್ಕೆ ರೆಡಿಯಾಗಿವೆ. ರಾಜ್ಯ ಸರಕಾರ ಕೊರೊನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಹೇಳುತ್ತಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳ ಹಣದ ದಾಹಕ್ಕೆ ಜನರು ತತ್ತರಿಸಿದ್ದಾರೆ. ಕೊರೊನಾ ಹೆಸರಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಕರಾವಳಿಯಲ್ಲಿ ಕೆಲವೊಂದು ಆಸ್ಪತ್ರೆಗಳು ಕೋವಿಡ್ ಗೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸುಳ್ಳು ಬಿಲ್ಲುಗಳನ್ನು ನೀಡಿ ವಂಚಿಸುತ್ತಿರುವ ಪ್ರಕರಣಗಳ ಹಿಂದೆ ಆಡಳಿತ ಪಕ್ಷ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.

ಇನ್ನು ಆಡಳಿತ ಪಕ್ಷವನ್ನು ಪ್ರಶ್ನಿಸ ಬೇಕಾಗಿರುವ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಯೊಂದಿಗೆ ಶಾಮೀಲಾಗಿ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲವನ್ನು ಮಾಡಿಕೊಡುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿರುವ ಕೆಲವು ನಾಯಕರುಗಳು ಖಾಸಗಿ ಆಸ್ಪತ್ರೆಗಳ ಜೊತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ. ಇದೇ ಕಾರಣದಿಂದಾಗಿ ಆಡಳಿತ ಪಕ್ಷದ ವೈಫಲ್ಯಗಳನ್ನು ಅವರ ಪ್ರಶ್ನೆ ಮಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸುಳ್ಳು ಬಿಲ್ಲುಗಳ ವಿರುದ್ಧ ಉಳ್ಳಾಲ, ಸುರತ್ಕಲ್ ಮುಂತಾದ ಕಡೆಗಳಲ್ಲಿನ ಜನರು ಈಗಾಗಲೇ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ.
ರಾಜ್ಯ ಸರಕಾರ ಕೊರೊನಾ ಸೋಂಕಿತರ ಕೈಗೆ ವರದಿಯನ್ನು ನೀಡದೇ ಇರುವುದು ಖಾಸಗಿ ಆಸ್ಪತ್ರೆಗಳಿಗೆ ಅನುಕೂಲವಾಗಿ ಪರಿಣಮಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಆಸ್ಪತ್ರೆಗಳು ನಕಲಿ ಬಿಲ್ ದಂಧೆಗೂ ಮುಂದಾಗಿವೆ ಅನ್ನುವ ಮಾತುಗಳಿವೆ. ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕೊರೊನಾ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲಾ.

ಆಡಳಿತ ಪಕ್ಷದ ಶಾಸಕರು ಕೆಲ ನಾಯಕರು ಖಾಸಗಿ ಆಸ್ಪತ್ರೆಗೆ ಬೆಂಬಲವಾಗಿ ನಿಂತಿದ್ರೆ, ಕಾಂಗ್ರೆಸ್ ಶಾಸಕರು, ನಾಯಕರ ವಿರುದ್ದವೂ ಗಂಭೀರ ಆರೋಪ ಕೇಳಿಬರುತ್ತಿವೆ. ಸ್ಥಳೀಯ ವಿಚಾರಗಳನ್ನು ಬಿಟ್ಟು ಕಾಂಗ್ರೆಸ್ ನಾಯಕರು ಅನಗತ್ಯ ವಿಚಾರಗಳ ಕುರಿತು ಬಿಜೆಪಿ ನಾಯಕರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆಡಳಿತ, ಪ್ರತಿಪಕ್ಷಗಳ ನಾಯಕರ ಬೇಜವಾಬ್ದಾರಿಗೆ ಇದೀಗ ಜನರು ಹೈರಾಣಾಗಿದ್ದಾರೆ.

ಕರಾವಳಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದಲ್ಲಿ ಮೂಲ ಹುಡುಕುವುದಾಗಿ ಹೇಳಿದ್ದ ಜಿಲ್ಲಾಡಳಿತ ಇದುವರೆಗೂ ಕೊರೊನಾ ಮೂಲವನ್ನೇ ಪತ್ತೆ ಮಾಡಿಲ್ಲ. ಕಾಂಗ್ರೆಸ್, ಬಿಜೆಪಿಗೂ ಅದು ಅಗತ್ಯವೆನಿಸಿದಂತಿಲ್ಲ. ಇನ್ನಾದ್ರೂ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸ್ವಾರ್ಥಕ್ಕಾಗಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಕೈ ಜೋಡಿಸುವುದನ್ನು ನಿಲ್ಲಿಸಿ, ಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುವತ್ತ ಮನಸ್ಸು ಮಾಡಬೇಕಿದೆ.