ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕಿನ ಆರ್ಭಟ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಶಾಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ನಡುವಲ್ಲೇ ಉಳ್ಳಾಲದಲ್ಲಿ ನಡೆದ ರಾಂಡಮ್ ಟೆಸ್ಟ್ ವರದಿ ಜಿಲ್ಲಾಡಳಿತವನ್ನೇ ಬೆಚ್ಚಿಬೀಳಿಸಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಸಾವಿರದ ಗಡಿದಾಟಿದೆ. ಆರಂಭದಲ್ಲಿ ಕೊರೊನಾ ಸೋಂಕು ಆರ್ಭಟಿಸಿದ್ರು, ತದನಂತರದಲ್ಲಿ ತಣ್ಣಗಾಗಿತ್ತು. ಅಲ್ಲೊಂದು ಇಲ್ಲೊಂದು ಪ್ರಕರಣ ಪತ್ತೆಯಾಗುತ್ತಿತ್ತು. ಆದರೆ ಕಳೆದೊಂದು ವಾರದಿಂದಲೂ ನಿತ್ಯವೂ ಕೊರೊನಾ ಸೋಂಕಿತರ ಸಂಖ್ಯೆ ಶತಕದಂಚಿಗೆ ಬಂದು ನಿಲ್ಲುತ್ತಿದೆ. ಜೂನ್ 26ರಂದು ಜಿಲ್ಲೆಯಲ್ಲಿ 519 ಪ್ರಕರಣ ದಾಖಲಾಗಿತ್ತು. ಆದರೆ ಒಂದೇ ವಾರದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಅದ್ರಲ್ಲೂ ಜುಲೈ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ ನಿತ್ಯವೂ ಶತಕದ ಗಡಿಯಂಚಿಗೆ ಬಂದು ನಿಲ್ಲುತ್ತಿದೆ. ಜುಲೈ 1ರಂದು 84, ಜುಲೈ 2 ರಂದು 90, ಜುಲೈ 3ರಂದು 97 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 1,012ಕ್ಕೆ ಏರಿಕೆಯನ್ನು ಕಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭದಲ್ಲಿ ಗುಣಮುಖರಾಗುವವರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಆದ್ರೀಗ ಆ ಪ್ರಮಾಣದಲ್ಲಿಯೂ ಇಳಿಕೆಯಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 487 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರೆ, 507 ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ಮಹಾಮಾರಿ ಕೊರೊನಾ ಜಿಲ್ಲೆಯಲ್ಲಿ ಇದುವರೆಗೆ 18 ಮಂದಿಯನ್ನು ಬಲಿ ಪಡೆದಿದೆ.

ಈ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆಯಾ ಅನ್ನುವ ಮಾತುಗಳು ಕೇಳಿಬರುತ್ತಿವೆ. ಅದ್ರಲ್ಲೂ ಮಂಗಳೂರು ನಗರದಲ್ಲಿಯೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚುತ್ತಿದ್ದು, ಉಳ್ಳಾಲ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಇದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಯು.ಟಿ.ಖಾದರ್ ಸೂಚನೆಯ ಮೇರೆಗೆ ಜಿಲ್ಲಾಡಳಿತ ರಾಂಡಮ್ ಟೆಸ್ಟ್ ನಡೆಸಿದ್ದು, ಒಂದೇ ದಿನ ಬರೋಬ್ಬರಿ 41 ಮಂದಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಉಳ್ಳಾಲ ವ್ಯಾಪ್ತಿಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಪತ್ತೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವ ಅನುಮಾನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾಂಡಮ್ ಟೆಸ್ಟ್ ನಡೆಸಿದ್ದು, ಆರಂಭದಲ್ಲಿ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಮೀನು ಮಾರಾಟಗಾರರನ್ನು ತಪಾಸಣೆಗೆ ಒಳಪಡಸಲಾಗಿತ್ತು. ರಾಂಡಮ್ ಟೆಸ್ಟ್ ವೇಳೆಯಲ್ಲಿ ದಾಖಲಾಗಿರುವ ಪ್ರಕರಣಗಳು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.

ಇದುವರೆಗೆ ಉಳ್ಳಾಲದಲ್ಲಿ 103 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಉಳ್ಳಾಲ ಠಾಣೆಯ 12 ಮಂದಿ ಪೊಲೀಸರು ಇದ್ದಾರೆ. ಇನ್ನು ಮಂಗಳೂರಲ್ಲಿ ಶಾಸಕ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊರೊನಾ ತಪಾಸಣೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿನ ವರ್ತಕರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಜಾರಿ ಮಾಡಿಕೊಳ್ಳುತ್ತಿದ್ದಾರೆ. ಉಳ್ಳಾಲದಲ್ಲಿ ಮಧ್ಯಾಹ್ನದ ವರೆಗೆ ಮಾತ್ರವೇ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಹರೇಕಳ ಗ್ರಾಮವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಒಟ್ಟಿನಲ್ಲಿ ಕರಾವಳಿ ಭಾಗಗಳಲ್ಲಿ ಜನರೇ ಸ್ವಯಂ ನಿರ್ಬಂಧ ಹಾಕಿಕೊಳ್ಳದ ಹೊರತು ಕೊರೊನಾ ಸೋಂಕನ್ನು ಅಷ್ಟು ಸುಲಭಕ್ಕೆ ನಿಯಂತ್ರಿಸೋದು ಕಷ್ಟಸಾಧ್ಯ.