ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ರಾಜ್ಯದಲ್ಲಿ 213 ಮಂದಿಗೆ ಕೊರೊನಾ ಸೋಂಕಿರುವು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 7,213ಕ್ಕೆ ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಇಂದೂ ಕೂಡ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಬರೋಬ್ಬರಿ 48 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆನ್ನು ನೋಡಿದ್ರೆ ಸದ್ಯದಲ್ಲಿಯೇ ರಾಜ್ಯದಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಇನ್ನು 35 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 725ಕ್ಕೆ ಏರಿಕೆಯಾಗಿದೆ. ಒಂದೆಡೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ರೆ ಇನ್ನೊಂದೆಡೆ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೇ ಏರಿಕೆಯಾಗಿದ್ದು, ಇದುವರೆಗೆ ಬೆಂಗಳೂರಲ್ಲಿ 33 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ.

ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ 34, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23, ರಾಯಚೂರು ಜಿಲ್ಲೆಯಲ್ಲಿ 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ 3, ಉಡುಪಿ 2, ಹಾವೇರಿ 2, ರಾಮನಗರ 2, ಹಾಗೂ ದಾವಣಗೆರೆಯಲ್ಲಿ ಓರ್ವರಿಗೆ ಸೋಂಕಿರುವುದು ದೃಢಪಟ್ಟಿದೆ.