ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಮತ್ತೆ ಮುಂದುವರಿದಿದೆ. ಕಲಬುರಗಿ, ಯಾದಗಿರಿ, ಬೀದರ್ ಹಾಗೂ ಉಡುಪಿ ಜಿಲ್ಲೆಗಳು ಕೊರೊನಾ ಸೋಂಕಿಗೆ ತತ್ತರಿಸಿ ಹೋಗಿವೆ. ರಾಜ್ಯದಲ್ಲಿಂದು ಬರೋಬ್ಬರಿ 308 ಮಂದಿಗೆ ಸೋಂಕು ಕಾಣಿಸಿಕೊಂಡಿದ್ರೆ, ಸೋಂಕಿತರ ಸಂಖ್ಯೆ 6,000ದ ಅಂಚಿಗೆ ಬಂದು ನಿಂತಿದ್ರೆ, ಕೃಷ್ಣ ನಗರ ಉಡುಪಿಯೊಂದರಲ್ಲೇ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟುವ ಆತಂಕ ಎದುರಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಬರೋಬ್ಬರಿ 99 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೊರೊನಾ ಮಹಾಮಾರಿ ಮೊದಲ ಬಲಿ ಪಡೆದಿದ್ದ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಕೊರೊನಾ ಮಹಾಮಾರಿಗೆ ನಲುಗಿ ಹೋಗಿರುವ ಉಡುಪಿ ಜಿಲ್ಲೆಯಲ್ಲಿಂದು ಕೊರೋನಾ ಆರ್ಭಟ ಮತ್ತೆ ಮುಂದುವರಿದಿದೆ. ಇಂದು ಬರೋಬ್ಬರಿ 45 ಮಂದಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ಕೊರೊನಾ ಪೀಡಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ. ಈ ಮೂಲಕ ಉಡುಪಿ ಜಿಲ್ಲೆ ಕೊರೊನಾ ಪೀಡಿತರ ಸಂಖ್ಯೆ ಸಾವಿರ ದಾಟುವುದಕ್ಕೆ ಹೆಚ್ಚು ಸಮಯವಿಲ್ಲ.

ಉಳಿದಂತೆ ಯಾದಗಿರಿ ಜಿಲ್ಲೆಯಲ್ಲಿಯೂ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿಂದು 66 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ಬೀದರ್ ಜಿಲ್ಲೆಯಲ್ಲಿ 48 ಮಂದಿಗೆ ಸೋಂಕು ದೃಢಪಟ್ಟಿದ್ರೆ, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 18, ಬಳ್ಳಾರಿಯಲ್ಲಿ 8, ಗದಗ 6, ಶಿವಮೊಗ್ಗ 4, ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2 ಹಾಗೂ ಕೊಪ್ಪಳ ಮತ್ತು ರಾಮನಗರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಇದುವರೆಗೆ 5,760 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 64 ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಉಳಿದಂತೆ 3,175 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.