ಮೂಲ್ಕಿ : ಎಂಟು ವರ್ಷದ ಮಗನೊಂದಿಗೆ ದಂಪತಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಹಳೆಯಂಗಡಿಯಲ್ಲಿ ನಡೆದಿದೆ.
ವಿನೋದ್ ಸಾಲಿಯಾನ್ ( 40 ವರ್ಷ), ರಚನಾ ಸಾಲಿಯಾನ್ ( 38 ವರ್ಷ) ಹಾಗೂ ಸಾಧ್ಯ ಸಾಲಿಯಾನ್ ( 8 ವರ್ಷ) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು.
ಮುಂಬೈನಲ್ಲಿ ನೆಲೆಸಿದ್ದ ವಿನೋದ್ ಸಾಲಿಯಾನ್ ಕಳೆದೊಂದು ವರ್ಷದಿಂದಲೂ ಹಳೆಯಂಗಡಿಯ ಕಲ್ಲಾಪುವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ, ಮಗನೊಂದಿಗೆ ವಾಸವಾಗಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡಿದ್ದ ವಿನೋದ್ ಸಾಲಿಯಾನ್ ದಂಪತಿ ಭಾನುವಾರ ಮನೆಯ ಬಾಗಿಲು ತೆರೆದಿರಲಿಲ್ಲ. ಸಂಶಯಗೊಂಡ ಸ್ಥಳೀಯರು ಮನೆಯ ಕಿಟಕಿ ಬಾಗಿಲು ಮುರಿದು ಪರಿಶೀಲಿಸಿದಾಗ ದಂಪತಿಗಳು ಮಗನೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಮೂಲ್ಕಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.