ನವದೆಹಲಿ: ವಿಶ್ವಕ್ಕೆ ಕಾಲಿಟ್ಟ ಕೊರೋನಾ ಎಲ್ಲ ಉದ್ಯಮವನ್ನು ಮಖಾಡೆ ಮಲಗಿಸಿದೆ. ದೇಶ-ವಿಶ್ವದ ಆರ್ಥಿಕತೇ, ಜಿಡಿಪಿ ಎಲ್ಲವೂ ಕುಸಿದು ಪಾತಾಳ ಸೇರಿದ್ದರೇ, ಅದೊಂದು ಉದ್ಯಮ ಮಾತ್ರ ಇನ್ನಿಲ್ಲದಷ್ಟು ಬೇಡಿಕೆ ಪಡೆದುಕೊಂಡಿದ್ದು, ಮಾರಾಟದಲ್ಲಿ ದಾಖಲೆ ಸಾಧಿಸಿದೆ.

ಅದ್ಯಾವ ಉದ್ಯಮ ಅಂದ್ರಾ…ಮತ್ತ್ಯಾವುದು ಅಲ್ಲ ಸೈಕಲ್ ಉದ್ಯಮ. ಹೌದು ಲಾಕ್ ಡೌನ್ ಬಳಿಕ ದೇಶದಲ್ಲಿ ಸೈಕಲ್ ಗೆ ಬೇಡಿಕೆ ಹೆಚ್ಚಿದ್ದು, ಭಾರತದ ಎಲ್ಲೆಡೆ ಹಿಂದೆಂದಿಗಿಂತ ಹೆಚ್ಚು ಸೈಕಲ್ ಮಾರಾಟವಾಗಿದೆ. ಅದರಲ್ಲೂ 10 ಸಾವಿರ ರೂಪಾಯಿಗಿಂತ ಹೆಚ್ಚಿನ ದರದ ಸೈಕಲ್ ಗಳಿಗೆ ಬೇಡಿಕೆ ಇದೆ.

ಕೊರೋನಾ ಒಕ್ಕರಿಸಿದ ಕಳೆದ 5 ತಿಂಗಳ ಅವಧಿಯಲ್ಲಿ ದೇಶದಲ್ಲಿ ಅಂದಾಜು 41 ಲಕ್ಷ ಸೈಕಲ್ ಗಳು ಮಾರಾಟವಾಗಿದ್ದು, ಈಗ ಸೈಕಲ್ ಖರೀದಿಸಲು ಬಯಸುವವರು ಬುಕ್ಕಿಂಗ್ ಮಾಡಿ 1 ವಾರದ ಕಾಲ ವೇಟ್ ಮಾಡಬೇಕಾದ ಸ್ಥಿತಿ ಇದೆ.

ಮೂಲಗಳ ಮಾಹಿತಿ ಪ್ರಕಾರ ಕೊರೋನಾದ ಬಳಿಕ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಅಷ್ಟೇ ಅಲ್ಲ ಕಾರು,ಬಸ್ ಗಳ ಜಾಗದಲ್ಲಿ ಸೇಫ್ ಆದ ಸೈಕಲ್ ಬಳಸಲು ಮುಂದಾಗಿದ್ದಾರೆ. ಹೀಗಾಗಿ ದೇಶದಲ್ಲಿ ಸೈಕಲ್ ಮಾರಾಟ ಹೆಚ್ಚಿದೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಮೇ ತಿಂಗಳಿನಿಂದ ಸಪ್ಟೆಂಬರ್ ವರೆಗಿನ ಅವಧಿಯಲ್ಲಿ ದೇಶದಲ್ಲಿ ಒಟ್ಟು 41 ಲಕ್ಷದ 80 ಸಾವಿರ 945 ಸೈಕಲ್ ಮಾರಾಟ ಮಾಡಲಾಗಿದೆ ಎಂದು ಭಾರತದ ಸೈಕಲ್ ಉತ್ಪಾದಕರ ಸಂಘ ಹೇಳಿದೆ.
ಸೈಕಲ್ ಗಳಲ್ಲೂ ಕೂಡ ಮಾಮೂಲಿ ಸೈಕಲ್ ಗಿಂತ ಸೈಕ್ಲಿಂಗ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗೆ ಬಳಸುವ 10 ಸಾವಿರಕ್ಕೂ ಅಧಿಕ ಬೆಲೆಯ ಸೈಕಲ್ ಗಳೇ ಹೆಚ್ಚು ಮಾರಾಟವಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.