ಬೆಂಗಳೂರು : ಕನ್ನಡದ ಖ್ಯಾತ ಬಂಡಾಯ ಸಾಹಿತಿ, ದಲಿತ ಕವಿ ಡಾ.ಸಿದ್ದಲಿಂಗಯ್ಯ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿಂದು ವಿಧಿವಶರಾಗಿದ್ದಾರೆ.
ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಸಿದ್ದಲಿಂಗಯ್ಯ ಅವರು ಕಳೆದ ಕೆಲವು ದಿನಗಳಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ರಾಮನಗರದ ಮಾಗಡಿ ತಾಲೂಕಿನ ಮಂಚನ ಬೇಲೆ ಗ್ರಾಮದಲ್ಲಿ ಜನಿಸಿದ ಡಾ. ಸಿದ್ದಲಿಂಗಯ್ಯ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಲೋಕದಲ್ಲಿ ತನ್ನನ್ನು ಗುರುತಿಸಿಕೊಂಡಿದ್ದರು. ನಾಟಕ, ಪ್ರಬಂಧ, ಸಂಶೋಧನೆ, ಕಾವ್ಯ, ಆತ್ಮಕಥನದ ಪ್ರಕಾರಗಳಲ್ಲಿ ಸಾಹಿತ್ಯವನ್ನು ಸೃಷ್ಟಿಸಿದ್ದರು, ದಲಿತ ಕವಿ ಎಂದೇ ಖ್ಯಾತರಾಗಿದ್ದ ಸಿದ್ದಲಿಂಗಯ್ಯನವರು, ದಲಿತ ಚಳುವಳಿಕೆ ಕ್ರಾಂತಿ ಗೀತೆಗಳ ಮೂಲಕ ಹೊಸ ರೂಪವನ್ನು ಕೊಟ್ಟವರು.
ಗ್ರಾಮದೇವತೆಗಳು ಮಹಾಪ್ರಬಂಧ, ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಅಲ್ಲೆ ಕುಂತವರೆ ಕವನ ಸಂಕಲನ, ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ ವಿಮರ್ಶನಾ ಕೃತಿಗಳನ್ನು ಬರೆದಿದ್ದಾರೆ. ಅಲ್ಲದೇ ಊರು ಕೇರಿ ಆತ್ಮಸಂಕಲನ, ಅವತಾರಗಳು, ಸದನದಲ್ಲಿ ಸಿದ್ದಲಿಂಹಯ್ಯ, ಜನಸಂಸ್ಕೃತಿ ಲೇಖನ ಸಂಕಲನಗಳನ್ನು ರಚಿಸಿದ್ದಾರೆ.
ಇವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನೃತಪತುಂಗ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು, ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಸೇವೆಯನ್ನು ಸಲ್ಲಿಸಿದ್ದಾರೆ. ಇಂದು ಸಂಜೆ 4.45ಕ್ಕೆ ಸಿದ್ದಲಿಂಗಯ್ಯ ನಿಧನರಾಗಿದ್ದು, ಇವತ್ತೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.