ಚಿಕ್ಕಮಗಳೂರು : ದಲಿತ ಯುವಕನೋರ್ವನನ್ನು ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆತಂದು ಮೂತ್ರಕುಡಿಸಿದ ಆರೋಪದ ಹಿನ್ನೆಲೆಯಲ್ಲಿ ಗೋಣಿಬೀಡು ಠಾಣೆಯ ಪಿಎಸ್ಐ ಅರ್ಜುನ್ ವಿರುದ್ದ ಇದೀಗ ಎಫ್ಐಆರ್ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದದ ನಿವಾಸಿ ಪುನಿತ್ ಎಂಬಾತ ವಿವಾಹಿತ ಮಹಿಳೆಯ ಜೊತೆಗೆ ಮಾತನಾಡುತ್ತಿದ್ದ. ಇದರಿಂದಾಗಿ ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ವಿವಾಹಿತ ಮಹಿಳೆಯ ಪತಿ ಗೋಣಿಬೀಡು ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುನಿತ್ ನನ್ನು ಠಾಣೆಗೆ ಕರೆಯಿಸಿ ಪೊಲೀಸರು ವಿಚಾರಣೆಯನ್ನು ನಡೆಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ತನ್ನನ್ನು ಮನಸೋ ಇಚ್ಚೆ ಥಳಿಸಿದ್ದಾರೆ. ಅಲ್ದಲೇ ಕುಡಿಯಲು ನೀರು ಕೇಳಿದಾಗ ಪಿಎಸ್ಐ ಅರ್ಜುನ್ ಅವರು ಕಳ್ಳತನ ಪ್ರಕರಣದಲ್ಲಿ ಬಂಧಿತನಾಇದ್ದ ಚೇತನ್ ಎಂಬಾತನಿಂದ ತನ್ನ ಬಾಯಿಗೆ ಮೂತ್ರ ಮಾಡಿಸಿದ್ದಾರೆ. ಅಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಅಂತಾ ದಲಿತ ಯುವಕ ಪುನಿತ್ ಪಿಎಸ್ಐ ಅರ್ಜುನ್ ವಿರುದ್ದ ಗಂಭೀರ ಆರೋಪ ಮಾಡಿದ್ದಾನೆ.
ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ದ ದೂರು ದಾಖಲಾಗಿಲ್ಲ. ರಾತ್ರಿ 10 ಗಂಟೆಯವರೆಗೂ ತನ್ನನ್ನು ಠಾಣೆಯಲ್ಲಿಯೇ ಕೂರಿಸಿಕೊಳ್ಳಲಾಗಿತ್ತು. ಪಿಎಸ್ಐ ಅರ್ಜುನ್ ಅವರು ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ ದಲಿತಪರ ಸಂಘಟನೆಗಳು ಪುನಿತ್ ಬೆಂಬಲಕ್ಕೆ ನಿಂತಿದ್ದು, ಪಿಎಸ್ಐ ವಿರುದ್ದ ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಚಿಕ್ಕಮಗಳೂರು ಎಸ್ಪಿ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ಅವರು ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಪಿಎಸ್ಐ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಗೋಣಿಬೀಡು ಠಾಣೆಯಲ್ಲಿ ಪಿಸ್‍ಐ ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 342, 323, 504, 506, 330, 348 ರ ಅಡಿ ಪ್ರಕರಣ ದಾಖಲಾಗಿದೆ.