ಕೊರೋನಾ ಎರಡನೇ ಅಲೆಯ ಪ್ರಭಾವ ನಿಧಾನಕ್ಕೆ ಕಡಿಮೆಯಾಗುತ್ತಿದ್ದು, ಮೂರನೇ ಅಲೆಯ ಭೀತಿ ಎದುರಾಗಿದೆ. ಇದರ ಮಧ್ಯೆಯೇ ವಿಶ್ವದಾದ್ಯಂತ ಕೊರೋನಾ ರೂಪಾಂತರಿ ಡೆಲ್ಟಾ ಪ್ಲಸ್ ಅಟ್ಟಹಾಸ ಆರಂಭವಾಗಿದ್ದು, ಇದು ಅತ್ಯಂತ ವೇಗವಾಗಿ ಹರಡುವ ವೈರಸ್ ಎಂದು ವಿಜ್ಞಾನಿಗಳು ಹಾಗೂ ವಿಶ್ವಸಂಸ್ಥೆ ಎಚ್ಚರಿಸಿದೆ.

ಈಗಾಗಲೇ ಡೆಲ್ಟಾ ವೈರಸ್ 85 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಬ್ರಿಟನ್, ಆಸ್ಟ್ರೇಲಿಯಾದ ಸಿಡ್ನಿ ಹಾಗೂ ಬಾಂಗ್ಲಾದೇಶದಲ್ಲಿ ಒಂದು ವಾರಗಳ ಲಾಕ್ ಡೌನ್ ಜಾರಿಯಾಗಿದೆ. ಇನ್ನು ಹಲವು ರಾಷ್ಟ್ರಗಳು ಈ ಡೆಲ್ಟಾ ಪ್ಲಸ್ ವೈರಸ್ ನಿಂದಾಗಿ ಮತ್ತೆ ಲಾಕ್ ಡೌನ್ ನಿರ್ಧಾರಕ್ಕೆ ಬರುತ್ತಿವೆ.

ಎರಡು ಡೋಸ್ ಪಡೆದವರಲ್ಲೂ ಈ ವೈರಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಕೊರೋನಾಗಿಂತ ವೇಗವಾಗಿ ಹರಡುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೇ ಇದು ಹೆಚ್ಚು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಫೇಬ್ರಿಯಿಸಸ್ ಎಚ್ಚರಿಸಿದ್ದಾರೆ.

ಡೆಲ್ಟಾ ವೈರಸ್ ಹೆಚ್ಚಿದ ಪ್ರಸರಣ, ಶ್ವಾಸಕೋಶದ ಸೆಲ್ ಗಳ ಮೇಲೆ ಹೆಚ್ಚು ಪರಿಣಾಮ ಹಾಗೂ ಮೊನೊಕ್ಲೋನಲ್ ಪ್ರತಿಕಾಯಗಳ ಸಂಭಾವ್ಯ ಕಡಿತದಂತಹ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಭಾರತದ ರಾಜಸ್ಥಾನದಲ್ಲಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವ 65ವರ್ಷದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದ್ದು, ಕೊರೋನಾದ ಪ್ರತಿಕಾಯ ಅಂಶಗಳನ್ನು ಹೊಂದಿರುವ ವಾಕ್ಸಿನ್ ಡೆಲ್ಟಾ ಪ್ಲಸ್ ವಿರುದ್ಧವೂ ರಕ್ಷಣೆ ನೀಡಬಲ್ಲದೇ ಎಂಬ ಕಳವಳ ಆರೋಗ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ .

ಇದುವರೆಗೂ ಭಾರತ,ಯುಎಸ್,ಯುಕೆ,ಪೋರ್ಚುಗಲ್,ಸ್ವಿಡ್ಜರ್ಲ್ಯಾಂಡ್, ಜಪಾನ್, ಪೊಲೆಂಡ್,ನೇಪಾಳ,ಚೀನಾ ಹಾಗೂ ರಷ್ಯಾದಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ. ಡೆಲ್ಟಾ ಪ್ಲಸ್ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂಬುದು ಆರೋಗ್ಯಾಧಿಕಾರಿಗಳ ಮಾತು.

ಹೀಗಾಗಿ ಕೊರೋನಾಕ್ಕೆ ನೀಡಲಾಗುತ್ತಿರುವ ಎರಡು ಡೋಸ್ ಲಸಿಕೆಗಳನ್ನು ಪಡೆಯುವುದು, ಕೈ-ಕಾಲುಗಳನ್ನು ಆಗಾಗ ತೊಳೆಯುವುದು, ಸ್ಯಾನಿಟೈಸರ್ ಬಳಸುವು ಹಾಗೂ ಸಾಮಾಜಿಕಅಂತರ,ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಿ ಡೆಲ್ಟಾ ಪ್ಲಸ್ ನಿಂದ ರಕ್ಷಿಸಿಕೊಳ್ಳಿ ಎಂದು ಸರ್ಕಾರ ಜನತೆಗೆ ಕರೆ ನೀಡಿದೆ.