ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರದ್ದು, ಆತ್ಮಹತ್ಯೆಯಲ್ಲ ಇದೊಂದು ರಾಜಕೀಯ ಕೊಲೆ. ಧರ್ಮೇಗೌಡರ ಸಾವು ತನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕಣ್ಣೀರು ಸುರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಧರ್ಮೇಗೌಡರ ನಿಧನಕ್ಕೆ ಕಣ್ಣೀರು ಸುರಿಸಿದ್ದಾರೆ. ಧರ್ಮೇಗೌಡರ ಸಾವು ವೈಯಕ್ತಿಕವಾಗಿ ನನಗೆ ಜೀವನದಲ್ಲಿ ಅಂತ್ಯಂತ ಘೋರವಾದ ಘಟನೆ. ನನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವಾಗಿದೆ. ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಅವರ ಕಾಲದಿಂದಲೂ ನನಗೂ ಹಾಗೂ ಅವರ ಕುಟುಂಬಕ್ಕೂ ಉತ್ತಮ ಬಾಂಧವ್ಯವಿತ್ತು. ಧರ್ಮೇಗೌಡರು ತಂದೆಯ ಹೆಸರನ್ನು ಉಳಿಸುವ ಕಾರ್ಯವನ್ನು ಮಾಡಿದ್ದಾರೆ. ಅತ್ಯಂತ ಸೂಕ್ಷ್ಮ ವ್ಯಕ್ತಿತ್ವದವರನ್ನು ಕಳೆದುಕೊಂಡಿದ್ದೇವೆ. ಯಾರಿಗೂ ನೋವನ್ನು ಹೇಳಿಕೊಳ್ಳದೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟು ವರ್ಷದ ರಾಜಕಾರಣದಲ್ಲಿ ಅವರು ಕೊನೆಯ ಕಾಲದಲ್ಲಿ ಆದ ಘಟನೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿರುವುದು ಭೇಸರ ಮೂಡಿಸಿದೆ.
ವಿಧಾನಪರಿಷತ್ ಘಟನೆಯ ನಂತರ ಅವರನ್ನು ಕರೆದು ಮಾತನಾಡಿದ್ದೇನೆ. ನಾವು ಹೇಳಿದಾಗ ಸಭಾಪತಿ ಸ್ಥಾನವನ್ನು ಅಲಂಕರಿಸಬೇಕು ಅಂತಾನೂ ಹೇಳಿದ್ದೇವು. ನನ್ನ ಸಲಹೆಯನ್ನು ಪಾಲಿಸಲು ತಿಳಿಸಿದ್ದೆ ಎಂದು ದೇವೇಗೌಡರು ಭಾವುಕರಾದ್ರು.
ಇನ್ನು ಧರ್ಮೇಗೌಡರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ನೇಹಿತನ ಸಾವಿಗೆ ಕಣ್ಣಿರು ಸುರಿಸಿದ್ದಾರೆ. ನನ್ನ ಸ್ನೇಹಿತ ಇಂದು ನನ್ನನ್ನು ಅಗಲಿ ಹೋಗಿದ್ದಾರೆ. ಇದು ರಾಜಕಾರಣದ ಕೊಲೆ ಎಂದು ಹೇಳುವೆ. ಇಂತಹ ಘಟನೆ ಸಹಿಸುವುದಕ್ಕೆ ಆಗುವುದಿಲ್ಲ. ಧರ್ಮೇಗೌಡ ನನ್ನ ಒಡಹುಟ್ಟಿದ ಸಹೋದರನಂತೆ ಇದ್ದರು. ಧರ್ಮೇಗೌಡ ತಂದೆ ಲಕ್ಷ್ಮಯ್ಯ ಒಂದು ಮಾತು ನನಗೆ ಹೇಳಿದ್ದರು.. ನಾನಂತೂ ಮಂತ್ರಿ ಆಗಲಿಲ್ಲ. ನಾನು ಬದುಕಿರುವಾಗಲೇ ನನ್ನ ಪುತ್ರ (ಧರ್ಮೇಗೌಡ) ಮಂತ್ರಿ ಆಗಬೇಕೆಂದಿದ್ದರು.ಆದರೆ ಅವರ ಆಸೆ ಈಡೇರಿಸಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಧರ್ಮೇಗೌಡರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಸಿದ್ದರಾಗಿದ್ದರು. ಈ ವೇಳೆಯಲ್ಲಿ ನಾನು ಬೇಕಾ ಇಲ್ಲಾ ಶಾಸಕ ಸ್ಥಾನ ಬೇಕಾ ಅಂತಾ ಕೇಳಿದ್ದೆ. ಆ ಒಂದು ಮಾತಿಗೆ ಅವರು ತನ್ನ ನಿರ್ಧಾರವನ್ನು ಬದಲಿಸಿ ಜೆಡಿಎಸ್ ನಲ್ಲಿಯೇ ಉಳಿದುಕೊಂಡಿದ್ದರು. ಇಂತಹ ಸ್ನೇಹಿತನನ್ನು ಕಳೆದುಕೊಂಡಿರುವುದು ಅತೀವ ನೋವವನ್ನು ತಂದಿದೆ ಎಂದಿದ್ದಾರೆ.