ಬೆಂಗಳೂರು : ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಇರಿಸಿದ್ದಾರೆ. ಮೊದಲ ರಾತ್ರಿಯನ್ನು ಕಳೆದಿರುವ ರಾಗಿಣಿ ಇಂದು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ. ಆದರೆ ಮಗಳನ್ನು ಭೇಟಿಯಾಗಲು ನಡುರಾತ್ರಿ ಬಂದ ಪೋಷಕರಿಗೆ ಸಿಸಿಬಿ ಅಧಿಕಾರಿಗಳು ಅವಕಾಶ ಕಲ್ಪಿಸಿಲ್ಲ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿರುವ ರಾಗಿಣಿ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ನಿನ್ನೆ ಸುಮಾರು 7 ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಿದ್ದ ಅಧಿಕಾರಿಗಳು ಇಂದೂ ಕೂಡ ಮತ್ತೆ ವಿಚಾರಣೆಯನ್ನು ಮುಂದುವರಿಸಲಿದ್ದಾರೆ. ರಾಗಿಣಿ ಮನೆಯ ಮೇಲೆ ದಾಳಿ ಮಾಡಿದ ಸಂರ್ಭದಲ್ಲಿ ಹಲವು ವಸ್ತುಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ರಾಗಿಣಿ ಆಪ್ತ ರವಿಶಂಕರ್ ನೀಡಿದ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ರಾಗಿಣಿ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರಾಗಿಣಿಯನ್ನು ಸಿದ್ದಾಪುರ ಸಮೀಪದಲ್ಲಿರುವ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗಿದ್ದು, ಸಾಮಾನ್ಯ ಆರೋಪಿಯಂತೆ ನಡೆಸಿಕೊಳ್ಳಲಾಗಿದೆ. ಯಾವುದೇ ವಿವಿಐಪಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ರಾತ್ರಿ ಚಪಾತಿ ಊಟ ನೀಡಲಾಗಿದ್ದು, ಭದ್ರತೆಗಾಗಿ ರೂಮಿನಲ್ಲಿ ಇಬ್ಬರು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ರೂಮಿನಲ್ಲಿ ಸೊಳ್ಳೆಯ ಕಾಟದ ಬಗ್ಗೆ ರಾಗಿಣಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾತ್ರಿ ರಾಗಿಣಿ ಊಟವನ್ನೂ ಮಾಡಿಲ್ಲ ಎಂದು ತಿಳಿದುಬಂದಿದೆ.

ಮಗಳು ರಾಗಿಣಿಗಾಗಿ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಬಟ್ಟೆ ತಂದಿದ್ದರುಮಗಳಿಗೆ ಊಟ ಕೊಡಲು ಪೊಲೀಸರು ಅವಕಾಶ ನೀಡಲಿಲ್ಲ. ಕೊನೆಗೆ ಊಟ, ಬಟ್ಟೆ ಎಲ್ಲವನ್ನು ವಾಪಸ್ ತೆಗೆದುಕೊಂಡು ಪೋಷಕರು ಮನೆಗೆ ಹೋಗಿದ್ದಾರೆ.