ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವವರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ನಡೆಯುತ್ತಿದೆ. ಅಂತೆಯೇ ನಿನ್ನೆ ದುಬೈನಿಂದ ಸ್ವದೇಶಕ್ಕೆ ಮರಳಿದ್ದ 35 ಮಂದಿ ಕ್ವಾರಂಟೈನ್ ಗೆ ಒಳಪಡದೆ, ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಮಂಗಳೂರು, ಮಡಿಕೇರಿಯಲ್ಲಿ ಆತಂಕ ಶುರುವಾಗಿದೆ.

ದುಬೈನಿಂದ ಖಾಸಗಿ ವಿಮಾನದಲ್ಲಿ ನಿನ್ನೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಸುಮಾರು 180 ಮಂದಿಯನ್ನು ಕರೆತರಲಾಗಿತ್ತು. ಈ ಪೈಕಿ ಮಂಗಳೂರು ಹಾಗೂ ಮಡಿಕೇರಿ 35 ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ವಿಮಾನವನ್ನು ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಕರ್ನಾಟಕದ 35 ಮಂದಿ ಕಣ್ಣೂರಿನಲ್ಲಿಯೇ ವಿಮಾನದಿಂದ ಇಳಿದಿದ್ದರು.

35 ಮಂದಿಯನ್ನು ಹೊರತು ಪಡಿಸಿ ಉಳಿದವರನ್ನು ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇವರನ್ನು ಕ್ವಾರಂಟೈನ್ ಮಾಡಲು ಕೇರಳ ಸರಕಾರ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಅವರೆಲ್ಲರೂ ಸೇವಾಸಿಂಧು ಆಪ್ ನಲ್ಲಿ ನೋಂದಣಿ ಮಾಡಿಸಿಕೊಂಡು ಮಂಗಳೂರು ಹಾಗೂ ಮಡಿಕೇರಿಗೆ ಬಂದಿದ್ದಾರೆ. ತದನಂತರದಲ್ಲಿ ಕ್ವಾರಂಟೈನ್ ಗೆ ಒಳಪಡದೆ ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಮಂಗಳೂರು ಹಾಗೂ ಮಡಿಕೇರಿ ಜಿಲ್ಲಾಡಳಿತ ಹುಡುಕುವ ಕಾರ್ಯವನ್ನು ಮಾಡುತ್ತಿದೆ.

ವಿದೇಶದಿಂದ ಅವರನ್ನು ಕರೆತಂದಿರುವ ಕಂಪೆನಿಯ ವಿರುದ್ದವೂ ಜಿಲ್ಲಾಡಳಿತ ಪ್ರಕರಣ ದಾಖಲಿಸಲು ಮುಂದಾಗಿದೆ. ವಿದೇಶದಿಂದ ಮರಳುತ್ತಿರುವ ಬಹುತೇಕರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಡುತ್ತಿದೆ. ಈ ಹಿನ್ನೆಲೆಯಲ್ಲೀಗ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ಶುರುವಾಗಿದೆ.