ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾತ್ರಿಯಿಡೀ ಎಡೆಬಿಡದೆ ಧಾರಾಕಾರವಾಗಿ ಮಳೆ ಸುರಿದಿದೆ. ಬಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಹಲವು ಕಡೆಗಳಲ್ಲಿನ ಜನರು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.

ರಾತ್ರಿ 8 ಗಂಟೆಯಿಂದ ಸುರಿಯಲು ಆರಂಭಿಸಿದ ಮಳೆ ಹೊತ್ತು ಕಳೆಯುತ್ತಿದ್ದಂತೆಯೇ ಆರ್ಭಟ ಜೋರಾಗುತ್ತಾ ಸಾಗಿತ್ತು. ಬೆಂಗಳೂರು ನಗರದ ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್ ಆರ್ ನಗರ ಸೇರಿದಂತೆ ಬೆಂಗಳೂರನ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.

ಅದ್ರಲ್ಲೂ ಭಾರೀ ಹೊರಮಾವು ಹಾಗೂ ಸಾಯಿಬಡಾವಣೆ ಸಂಪೂರ್ಣ ಜಲಾವೃತಗೊಂಡಿದ್ದು, ಹೊರಮಾವು ಕೆರೆ ಪಕ್ಕದಲ್ಲಿರುವ ವಿವಿಧ ಬಡಾವಣೆಗಳಿಗೆ ಮಳೆಯ ನೀರು ನುಗ್ಗಿದೆ. ದೇವಸ್ಥಾನ, ಮನೆಯೊಳಗೆ ನೀರು ನುಗ್ಗಿದ್ದರಿಂದಾಗಿ ಜನರು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿತ್ತು.

ಮಳೆಯ ಅಬ್ಬರಕ್ಕೆ ರಸ್ತೆಯ ಮೇಲೆಲ್ಲಾ ನೀರು ತುಂಬಿ ಹರಿಯುತ್ತಿದ್ದು, ರಾಜಾಕಾಲುವೆಗಳು ಆರ್ಭಟಿಸುತ್ತಿವೆ. ಮಳೆಯಿಂದಾಗಿ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದಾಗಿ ಸಾಕಷ್ಟು ಸಮಸ್ಯೆಯುಂಟಾಗಿದ್ದರೂ ಕೂಡ ಸಮಸ್ಯೆ ಆಲಿಸಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.