ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಆದೇಶ ಇನ್ನಷ್ಟು ದಿನಗಳ ಕಾಲ ಮುಂದುವರಿಯೋ ಸಾಧ್ಯತೆಯಿದೆ. ಅದ್ರಲ್ಲೂ ಲಾಕ್ ಡೌನ್ ಗಿಂತಲೂ ಕಟ್ಟನಿಟ್ಟಿನ ಕ್ರಮಕೈಗೊಳ್ಳಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿ ‘ಸೀಲ್’ ಬ್ರಹ್ಮಾಸ್ತ್ರ ಪ್ರಯೋಗಿಸಲು ರಾಜ್ಯ ಸರಕಾರ ಮುಂದಾಗಿದೆ.

ದೇಶದಾದ್ಯಂತ ಜಾರಿಯಲ್ಲಿರುವ 21 ದಿನಗಳ ಲಾಕ್ ಡೌನ್ ಆದೇಶ ಎಪ್ರಿಲ್ 14ಕ್ಕೆ ಅಂತ್ಯಗೊಳ್ಳಲಿದೆ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಮಹಾಮಾರಿಯ ರುದ್ರನರ್ತನ ಮುಂದುವರಿದಿದೆ. ಅದ್ರಲ್ಲೂ ರೆಡ್ ಅಲರ್ಟ್ ಜಾರಿಯಲ್ಲಿರೊ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರೋ ಜಿಲ್ಲೆಗಳ ಜೊತೆಗೆ ರಾಜ್ಯದ 20 ಜಿಲ್ಲೆಗಳನ್ನು ಸೀಲ್ ಮಾಡೋದಕ್ಕೆ ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ಜನರು ಔಷಧ, ಅಗತ್ಯವಸ್ತುಗಳ ಖರೀದಿ, ವೈದ್ಯಕೀಯ ಸೇವೆ ಅಂತೆಲ್ಲಾ ಮನೆಯಿಂದ ಹೊರಬರುತ್ತಿದ್ರು. ಒಂದೊಮ್ಮೆ ಜಿಲ್ಲೆಗಳಿಗೆ ಸೀಲ್ ಮಾಡಿದ್ರೆ ಯಾರು ಕೂಡ ಮನೆಯಿಂದ ಹೊರ ಬರೋದಕ್ಕೆ ಸಾಧ್ಯವೇ ಇಲ್ಲಾ.

ಜಿಲ್ಲೆಗಳನ್ನೇ ಸೀಲ್ ಮಾಡಿದ್ರೆ ಏನೆಲ್ಲಾ ಇರುತ್ತೆ ?
ಈಗಾಗಲೇ ಉತ್ತರ ಪ್ರದೇಶ ಸರಕಾರ ಕೊರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಗಳನ್ನೇ ಸೀಲ್ ಮಾಡಿದೆ. ಉತ್ತರ ಪ್ರದೇಶ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಜಿಲ್ಲೆಗಳನ್ನು ಸೀಲ್ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಜಿಲ್ಲೆಗಳು ಸೀಲ್ ಆದ್ರೆ ಶೇ.100 ರಷ್ಟು ಲಾಕ್ ಡೌನ್ ಆದೇಶ ಜಾರಿಯಾಗುತ್ತೆ.

ಯಾರೂ ಕೂಡ ಮನೆಯ ಬಾಗಿಲು ತೆರೆದು ಹೊರಗೆ ಬರುವಂತಿಲ್ಲ. ವೈದ್ಯಕೀಯ ಸೇವೆಯನ್ನು ಹೊರತು ಪಡಿಸಿ ಎಲ್ಲಾ ಸೇವೆಗಳು ಕೂಡ ಸಂಪೂರ್ಣವಾಗಿ ಬಂದ್ ಆಗಲಿವೆ. ಜಿಲ್ಲೆಗಳನ್ನು ಸೀಲ್ ಮಾಡೋ ಮೊದಲು ಸರಕಾರ ಹೆಲ್ಪ ಲೈನ್ ನಂಬರ್ ನೀಡಲಿದೆ. ಜನರಿಗೆ ಯಾವುದೇ ಸಾಮಗ್ರಿಗಳು ಬೇಕಾದ್ರೆ, ಯಾವುದೇ ಸೇವೆಯ ಅಗತ್ಯವಿದ್ದರೂ ಕೂಡ ಕಡ್ಡಾಯವಾಗಿ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಬೇಕು.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ತುಮಕೂರು, ಕಲಬುರಗಿ, ಚಿಕ್ಕಬಳ್ಳಾಪುರ, ಮಂಡ್ಯ, ದಾವಣಗೆರೆ, ಬೆಳಗಾವಿ, ಉಡುಪಿ, ಮಡಿಕೇರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಸುಮಾರು 20 ಜಿಲ್ಲೆಗಳನ್ನು ಸೀಲ್ ಮಾಡುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಜನರು ಹೊರ ಜಿಲ್ಲೆಗಳಿಗೆ ಪ್ರವೇಶ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.

ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ಹಾಗೂ ಅಂಬುಲೆನ್ಸ್ ಹೊರತು ಪಡಿಸಿ ಬೇರಾರೂ ಕೂಡ ಯಾವುದೇ ಕಾರಣಕ್ಕೂ ರಸ್ತೆಗೆ ಇಳಿಯುವಂತಿಲ್ಲ. ಇನ್ನು ಮಾದ್ಯಮದವರಿಗೂ ನಿರ್ಬಂಧ ಹೇರಲಾಗುತ್ತದೆ. ಸರಕಾರದಿಂದ ನೇಮಕವಾಗುವ ಸಿಬ್ಬಂಧಿ ಮಾದ್ಯಮದವರಿಗೆ ಬೇಕಾದ ಸುದ್ದಿಗಳನ್ನು ವಿತರಿಸೋ ಕೆಲಸ ಮಾಡುತ್ತಾರೆ. ಹೀಗಾಗಿ ಜಿಲ್ಲೆಗಳನ್ನು ಸೀಲ್ ಮಾಡಿದ ನಂತರದಲ್ಲಿ ನಿಯಮವನ್ನು ಉಲ್ಲಂಘನೆ ಮಾಡಿದ್ರೆ ಜೈಲು ಸೇರೋದು ಗ್ಯಾರಂಟಿ.