ಮಂಗಳೂರು : ಅದಾನಿ ಸಂಸ್ಥೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ದಿ ಹಾಗೂ ನಿರ್ವಹಣೆ ಹೊಣೆಯನ್ನು ಹಸ್ತಾಂತರಿಸಿರುವ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.

ಮಂಗಳೂರು, ಅಹಮದಾಬಾದ್, ಜೈಪುರ, ಗೋವಾ, ಲಖನೌ, ಗುವಾಹಟಿ ವಿಮಾನ ನಿಲ್ದಾಣಗಳನ್ನು ಸರಕಾರಿ ಖಾಸಗಿ ಸಹಭಾಗಿತ್ವದಡಿಯಲ್ಲಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಜೊತೆಗೆ ನಿರ್ವಹಣೆ ಮತ್ತು ಅಭಿವೃದ್ದಿಯ ಹೊಣೆಯನ್ನು ನೀಡುವ ಕುರಿತು ಕೇಂದ್ರ ಸರಕಾರ 2018ರ ನವೆಂಬರ್ 8 ರಂದು ನಿರ್ಧಾರ ಕೈಗೊಂಡಿತ್ತು. ಆದರೆ ಈ ಕ್ರಮ ಕಾನೂನು ಬಾಹಿರವಾಗಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಉದ್ಯೋಗಿಗಳ ಸಂಘ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಮಾಡಿತ್ತು.

ಈ ಕುರಿತು ವಿಚಾರಣೆ ನಡೆಸಿದ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆಯನ್ನು ನೀಡಿದೆ.