ಕೋಟ : ಕೃಷಿ ಕಾರ್ಯ ಮಾಡುವ ವೇಳೆಯಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದು, ಒಟ್ಟು 6 ಮಂದಿ ಮಹಿಳೆಯರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಕಾಸನಗುಂದುವಿನಲ್ಲಿ ನಡೆದಿದೆ.

ಕಾಸನಗುಂದು ನಿವಾಸಿಗಳಾದ ಪ್ರೇಮ, ಬುಡ್ಡು, ಕಾವೇರಿ, ಪದ್ದು, ಸುಶೀಲಾ ಹಾಗೂ ಲಚ್ಚಿ ಎಂಬವರೇ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯರು. ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ಕೃಷಿ ಕಾರ್ಯದಲ್ಲಿ ತೋಡಗಿಕೊಂಡಿದ್ದ ವೇಳೆಯಲ್ಲಿ ಆರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ಮಾಡಿದೆ.

ಕೂಡಲೇ ಗಂಭೀರವಾಗಿ ಅಸ್ವಸ್ಥಗೊಂಡಿರುವ ಪ್ರೇಮ ಮತ್ತು ಬುಡ್ಡು ಎಂಬವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ರೆ, ಕಾವೇರಿ, ಸುಶೀಲಾ, ಪದ್ದು ಎಂಬವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಚ್ಚಿ ಎಂಬಾಕೆ ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಜೇನುಗೂಡಿಗೆ ಹದ್ದು ದಾಳಿ ಮಾಡಿದ ಹಿನ್ನೆಲೆಯಲ್ಲಿ ಜೇನುನೊಣಗಳು ಶೇಂಗಾ ಗದ್ದೆಗೆ ನುಗ್ಗಿವೆ. ಈ ವೇಳೆಯಲ್ಲಿ ಗದ್ದೆಯಲ್ಲಿ ಕಳೆ ತೆಗೆದು ವಾಪಾಸಾಗುತ್ತಿದ್ದ ಮಹಿಳೆಯರ ಮೇಲೆ ಜೇನುಗಳು ದಾಳಿ ನಡೆಸಿವೆ. ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯರಾದ ಚಂದ್ರ ಪೂಜಾರಿ ಕದ್ರಿಕಟ್ಟು, ಗೋವಿಂದ ಮರಕಾಲ, ಅಶೋಕ , ಮಂಜು, ಆದಿತ್ಯ, ಶ್ರೀನಿಧಿ, ನೀಲು ಎಂಬವರು ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ.

ಸಾಹಸ ಮೆರೆದ ಸಿಂಚನಾ
ಜೇನುನೊಣಗಳು ದಾಳಿ ಮಾಡುತ್ತಿದ್ದಂತೆಯೇ ಮಹಿಳೆಯರು ಜೋರಾಗಿ ಕೂಗಿಕೊಂಡಿದ್ದಾರೆ. ಮಹಿಳೆಯರು ಸ್ಥಳದಲ್ಲಿಯೇ ಇದ್ದ ಮನೆಗೆ ತೆರಳಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿಯೇ ಇದ್ದ ಸಿಂಚನಾ ಎಂಬಾಕೆ ತನ್ನ ಜೀವವನ್ನೂ ಲೆಕ್ಕಿಸದೇ ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾಳೆ.
ಮಹಿಳೆಯ ಮೈ ಮೇಲೆ ಕಚ್ಚಿದ್ದ ಜೇನು ನೊಣಗಳನ್ನು ಹೊರ ತೆಗೆಯಲು ಯತ್ನಿಸಿದ್ದಾಳೆ. ಕೂಡಲೇ 108 ಅಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಯುವತಿಯ ಸಾಹಸವನ್ನು ಸ್ಥಳೀಯರು ಇದೀಗ ಕೊಂಡಾಡುತ್ತಿದ್ದಾರೆ.