ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಬಿಗ್ ಶಾಕ್ ಕೊಟ್ಟಿದೆ. ಬೆಳ್ಳಂಬೆಳ್ಳಗ್ಗೆಯೇ ಡಿಕೆಶಿ ಹಾಗೂ ಸಹೋದರ ಸಂಸದ ಡಿ.ಕೆ.ಸುರೇಶ್ ಅವರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. 5 ಮಂದಿಯ ತಂಡ ಈ ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿದ್ದ ಡಿಕೆ ಶಿವಕುಮಾರ್ ನಂತರ ಜೈಲು ಸೇರಿದ್ದರು. ಡಿ.ಕೆ.ಶಿವಕುಮಾರ್ ಅವರ ವಿರುದ್ದ ತನಿಖೆಯನ್ನು ನಡೆಸಲು ರಾಜ್ಯ ಸರಕಾರ ಅನುಮತಿ ಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿ ವಜಾಗೊಳಿಸುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಇನ್ನೊಂದು ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಬಾಕಿಯಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆಯ ಬೆನ್ನಲ್ಲೇ ಇದೀಗ ಡಿ.ಕೆ.ಶಿವಕುಮಾರ್ ಬೆನ್ನಿಗೆ ಸಿಬಿಐ ಅಧಿಕಾರಿಗಳು ಬಿದ್ದಿದ್ದಾರೆ. ಪ್ರಮುಖವಾಗಿ ಡಿ.ಕೆ.ಶಿವಕುಮಾರ್ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಯೇ ಸಿಬಿಐ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮನೆಯಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ಹಂತದ ತನಿಖೆಯನ್ನು ನಡೆಸುವ ಸಲುವಾಗಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿರೋ ಕುರಿತು ಸಾಕ್ಷ್ಯಗಳು ಲಭ್ಯವಾದ್ರೆ ಡಿಕೆಶಿಗೆ ಮತ್ತೆ ಸಂಕಷ್ಟ ಎದುರಾಗೋದು ಗ್ಯಾರಂಟಿ.