ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಬೆಂಗಳೂರಿನ ಸಂಜಯ ನಗರದಲ್ಲಿ ಇರುವ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ.
ಐಎಂಎಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ಹೆಸರು ಕೇಳಿಬಂದಿತ್ತು. ಐಎಂಎ ಅಧ್ಯಕ್ಷ ಮನ್ಸೂರ್ ಖಾನ್ ನಿಂದ ನೂರಾರು ಕೋಟಿ ರೂಪಾಯಿಯನ್ನು ರೋಷನ್ ಬೇಗ್ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಹಣವಷ್ಟೇ ಅಲ್ಲ, ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆಂಬ ಆರೋಪವಿದೆ.
ಈ ಪ್ರಕರಣದಲ್ಲಿ ತಮ್ಮ ಮೇಲೆ ಆರೋಪ ಬಂದ ಕೂಡಲೇ ಕಾಂಗ್ರೆಸ್ ಪಕ್ಷ ಹಾಗೂ ಶಿವಾಜಿನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ ಬೇಗ್, ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದರು. ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿಯೇ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು.
ಆದರೆ, ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.