ಕೊರೋನಾದಿಂದ ತತ್ತರಿಸಿದ ಭಾರತದ ಅರ್ಥ ವ್ಯವಸ್ಥೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಯೋಜನೆ ಘೋಷಿಸಿದ್ದು, ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಕೊರೋನಾ ಪೀಡಿತ 8 ವಲಯಗಳಿಗೆ 1.1 ಲಕ್ಷ ಕೋಟಿ ರೂಪಾಯಿಗಳ ಸಾಲಖಾತರಿ ಯೋಜನೆ ಸೇರಿ ಹಲವು ಸಹಾಯ ಪ್ರಕಟಿಸಿದ್ದಾರೆ.

ಸಾಲ ಖಾತರಿ ಯೋಜನೆಯಡಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ 50 ಸಾವಿರ ಕೋಟಿ, ಸಾರ್ವಜನಿಕ ಆರೋಗ್ಯಕ್ಕಾಗಿ 23,220 ಕೋಟಿ ಹಾಗೂ ಇತರ ಕ್ಷೇತ್ರಗಳಿಗೆ 60,000 ಲಕ್ಷ ಕೋಟಿ ಘೋಷಿಸಿದ್ದಾರೆ. ಅಲ್ಲದೇ ತುರ್ತು ಕ್ರೆಡಿಟ್ ಗ್ಯಾರಂಟಿ ಸಾಲ ಯೋಜನೆಯಡಿ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ.

ಈ ಮೊದಲು ಸರ್ಕಾರ ನಿಗದಿಪಡಿಸಿದ ಸಾಲದ ಮೊತ್ತ 3 ಲಕ್ಷ ರೂಪಾಯಿಗಳಿದ್ದು,ಇದನ್ನು ಈಗ 4.5 ಲಕ್ಷ ರೂಪಾಯಿಗೆ ಕೇಂದ್ರ ಸರ್ಕಾರ ಏರಿಸಿದೆ. ಎಂಎಫ್ಐ ಗಳ ಮೂಲಕ ಸಾಲವನ್ನು ಸುಗಮಗೊಳಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತರಿ ಯೋಜನೆ ಘೋಷಿಸಿದ್ದು, ಇದರ ಅನ್ವಯ ಪ್ರತಿ ವ್ಯಕ್ತಿಗೆ 1.25 ಲಕ್ಷ ರೂಪಾಯಿ ಸಾಲದ ಮೇಲಿನ ಬಡ್ಡಿ ದರ ಎಂಸಿಎಲ್ಆರ್ ಮತ್ತು ಶೇಕಡಾ 2 ರಷ್ಟು ಬಡ್ಡಿದರ ಎಂದು ನಿಗದಿಪಡಿಸಲಾಗಿದೆ.

ಇನ್ನು ಕೊರೋನಾದಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಪ್ರವಾಸೋದ್ಯಮ ಕ್ಷೇತ್ರದ 11 ಸಾವಿರಕ್ಕೂ ಅಧಿಕ ನೊಂದಾಯಿತ ಗೈಡ್ ಮತ್ತು ಪ್ರವಾಸೋದ್ಯಮ ಆಧಾರಿತ ಉದ್ಯೋಗಿಗಳಿಗೆ ಸಾಲ ಖಾತರಿ ಯೋಜನೆಯಡಿ ಹಣಕಾಸು ಸಹಾಯವನ್ನು ಸಚಿವರು ಘೋಷಿಸಿದ್ದಾರೆ.

ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷ ರೂಪಾಯಿ ಸಾಲ ಸೌಲಭ್ಯವಿದೆ. ಅಲ್ಲದೇ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ 100 ಕೋಟಿ ವೆಚ್ಚದಲ್ಲಿ 5 ಲಕ್ಷ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಉಚಿತ ಧಾನ್ಯಗಳ ವಿತರಣೆ 2021 ನವೆಂಬರ್ ವರೆಗೆ ನಡೆಯಲಿದ್ದು, ಇದಕ್ಕಾಗಿ 93,869 ಕೋಟಿ ಮೊತ್ತದ ಆಹಾರ ಧಾನ್ಯ ಖರೀದಿಸಲಾಗಿದೆ. ಅಲ್ಲದೇ ರೈತರಿಗೆ ಸಹಾಯಹಸ್ತ ಚಾಚಿರುವ ಸರ್ಕಾರ ರಿಯಾಯತಿ ದರದಲ್ಲಿ ರಸಗೊಬ್ಬರ ವಿತರಣೆ ಸೇರಿದಂತೆ ಹಲವು ಯೋಜನೆ ಘೋಷಿಸಿದೆ.