ನವದೆಹಲಿ:ಹೋದೆಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷಿಲಿ ಅನ್ನೋ ಹಾಗೇ ಹೊಸ ರೂಪದಲ್ಲಿ ಭಾರತಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದ್ದ ಪಬ್ ಜೀ ಗೇಮ್ ಗೆ ಕೇಂದ್ರಸರ್ಕಾರ ಅಂಕುಶ ಹೇರಿದೆ.

ಸಧ್ಯದಲ್ಲೇ ಮೊಬೈಲ್ ಆನ್ ಲೈನ್ ಗೇಮ್ ಲೋಕಕ್ಕೆ ಲಗ್ಗೆ ಇಡಬೇಕಿದ್ದ ಪಬ್ ಜೀ ಗೇಮ್ ಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಸಧ್ಯ ಭಾರತಕ್ಕೆ ಪಬ್ಜಿ ಪ್ರವೇಶಕ್ಕೆ ಕೇಂದ್ರ ಅವಕಾಶ ನೀಡಿಲ್ಲ.ಚೀನಾದ ಜೊತೆ ನಂಟು ಹೊಂದಿರುವ ಮೊಬೈಲ್ ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಈ ಪಟ್ಟಿಯಲ್ಲಿ ಪಬ್ ಜೀ ಗೂ ಸ್ಥಾನ ನೀಡಿತ್ತು.

ಪಬ್ ಜೀ ಗೇಮ್ ಬ್ಯಾನ್ ಆಗಿದ್ದರಿಂದ ಯುವಜನತೆಗೆ ಬೇಸರವೂ ಆಗಿತ್ತು. ಈ ಮಧ್ಯೆ ದೇಶದ ಭದ್ರತೆಗೆ ಯಾವುದೇ ಚ್ಯುತಿಯಾಗದಂತೆ ಭಾರತದಿಂದಲೇ ನಿರ್ವಹಿಸಲ್ಪಡುವ ಸರ್ವರ್ ಜೊತೆ ಪಬ್ ಜೀ ರೀ ಲಾಂಚ್ ಮಾಡೋದಾಗಿ ಪಬ್ ಜೀ ಗೇಮ್ ಕಂಪನಿ ಹೇಳಿಕೊಂಡಿತ್ತು.

ಅಷ್ಟೇ ಅಲ್ಲ ಪಬ್ಜಿ ಮೊಬೈಲ್ ಬ್ಯಾಂಕಿಂಗ್ ಇಂಡಿಯಾ ಹೆಸರಿನಲ್ಲಿ ಭಾರತಕ್ಕೆ ಗೇಮ್ ಪರಿಚಯಿಸಲು ಸಿದ್ಧತೆ ನಡೆದಿತ್ತು. ಯುವಜನತೆಯ ನ್ನು ಸೆಳೆಯುವ ನಿಟ್ಟಿನಲ್ಲಿ ಆಕರ್ಷಕ ಗೇಮ್ ಟೂರ್ನಿ ಹಾಗೂ ೬ ಕೋಟಿ ರೂಪಾಯಿಗಳ ಬಹುಮಾನದ ಘೋಷಣೆಯನ್ನು ಮಾಡಲಾಗಿತ್ತು.

ಆದರೆ ಈಗ ಈ ಗೇಮ್ ರೀ ಲಾಂಚ್ ಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಪಬ್ಜಿ ಪುನರಾರಂಭಿಸಲು ಕಂಪನಿ ಕೇಂದ್ರ ಸರ್ಕಾರದ ಜೊತೆ ಸತತ ಸಂಪರ್ಕದಲ್ಲಿದ್ದು ಇದುವರೆಗೂ ಅಧಿಕಾರಿಗಳು ಮಾತುಕತೆಗೆ ಸಿಕ್ಕಿಲ್ಲ ಎಂದು ಕಂಪನಿ ಹೇಳಿದೆ .ಕೇಂದ್ರ ಸರ್ಕಾರ ಪಬ್ಜಿ ಇಂಡಿಯಾ ಪುನರಾರಂಭಕ್ಕೆ ಅವಕಾಶ ನಿರಾಕರಿಸಿದ್ದು, ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ.