ಕೊರೋನಾ ಲಸಿಕೆಗಳ ನಡುವಿನ ಅಂತರವಾಗಿ ಸತತವಾಗಿ ಹೆಚ್ಚಿಸಿ ಸದ್ಯ ಎರಡು ಲಸಿಕೆಗಳ ನಡುವೆ 12 ರಿಂಧ 16 ವಾರ ಅಂತರ ಘೋಷಿಸಿರುವ ಭಾರತಕ್ಕೆ ಶಾಕ್ ಎದುರಾಗಿದೆ. ಹೀಗೆ ಲಸಿಕೆಗಳ ನಡುವೆ ಅಂತರ ಹೆಚ್ಚಿಸುವುದು ಪರಿಣಾಮದ ದೃಷ್ಟಿಯಲ್ಲಿ ಅಪಾಯಕಾರಿ ಎಂದು ಅಮೇರಿಕಾ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ ಡಾ. ಅಂಥೋನಿ ಫೌಸಿ ಹೇಳಿದ್ದಾರೆ.

ಭಾರತದ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಾ.ಅಂಥೋನಿ ಲಸಿಕೆಗಳ ಡೋಸ್ ನಡುವಿನ ಅಂತರವನ್ನು ಹೆಚ್ಚಿಸಿದರೇ ಸೋಂಕಿಗೆ ತುತ್ತಾಗುವ ಅಪಾಯವೂ ಹೆಚ್ಚು ಎಂದಿದ್ದಾರೆ. ಬ್ರಿಟನ್ ನಲ್ಲಿ ಲಸಿಕೆಗಳ ನಡುವಿನ ಅಂತರವನ್ನು ಹೆಚ್ಚಿಸಿದ್ದಕ್ಕೆ ಜನರು ಸೋಂಕಿಗೆ ತುತ್ತಾದ ಪ್ರಕರಣಗಳು ವರದಿಯಾಗಿವೆ ಎಂಬ ಸಂಗತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.

ಎಂಆರ್ಎನ್ಎ ಲಸಿಕೆಗಳ ನಡುವೆ ಮೂರು ವಾರಗಳ ಅಂತರ ಸೂಕ್ತ, ಇನ್ನು ಫೈಜರ್ ಅಥವಾ ಮಾಡೆರ್ನಾ ಲಸಿಕೆಗಳ ನಡುವೆ ನಾಲ್ಕು ವಾರಗಳ ಅಂತರವಿದ್ದರೇ ಸಾಕು ಎಂದು ಅಭಿಪ್ರಾಯಿಸಿದ್ದು, ಡೆಲ್ಟಾದಂತಹ ಅಪಾಯಕಾರಿ ಕೊರೋನಾ ರೂಪಾಂತರಗಳಿಂದ ರಕ್ಷಣೆ ಪಡೆಯಲು ತ್ವರಿತವಾಗಿ ಲಸಿಕೆ ನೀಡುವ ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಮೊದಲು 28 ದಿನಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಲು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಬಳಿಕ ತಜ್ಞರ ವರದಿ ಆಧರಿಸಿ ಕಳೆದ ತಿಂಗಳಷ್ಟೇ ಲಸಿಕೆಗಳ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ಏರಿಕೆ ಮಾಡಿತ್ತು.

ಆದರೆ ಈ ಹೇಳಿಕೆಗೆ ಭಾರತದ ಲಸಿಕೆ ನೀತಿ ಆಯೋಗದ ಅಧ್ಯಕ್ಷ ಡಾ. ಪೌಲ್ ವಿವರಣೆ ನೀಡಿದ್ದು, ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಧೀರ್ಘಕಾಲದ ರಕ್ಷಣೆ ನೀಡುತ್ತದೆ ಎಂದ ಅಂತಾರಾಷ್ಟ್ರೀಯ ವರದಿಗಳ ಅಂಶ ಆಧರಿಸಿ ಈ ನಿರ್ಣಯಕೈಗೊಳ್ಳಲಾಗಿದೆ. ಆತಂಕದ ಅಗತ್ಯವಿಲ್ಲ ಎಂದಿದ್ದಾರೆ.