ಚಿಕ್ಕಮಗಳೂರು : ಮನೆಯೊಳಗೆ ನುಗ್ಗಿದ ದರೋಡೆಕೋರರು ಗರ್ಭಿಣಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.

ಕವಿತಾ (31 ವರ್ಷ) ಮೃತ ಮಹಿಳೆ. ಕವಿತಾ ಪತಿ ಡಾ. ರೇವಂತ್ ಬೀರೂರಿನಲ್ಲಿ ದಂತವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಕಡೂರಿನ ಲಕ್ಷ್ಮೀನಗರದಲ್ಲಿರುವ ಮನೆಯಲ್ಲಿ ಕವಿತಾ ಒಬ್ಬರೇ ಇದ್ದರು. ಸಂಜೆ 6.45ರ ಸುಮಾರಿಗೆ ಪತಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ ವೈದ್ಯರು ಮನೆಗೆ ಬಂದು ನೋಡುವಾಗ ಪತ್ನಿಯನ್ನು ಹತ್ಯೆ ಮಾಡಲಾಗಿತ್ತು. ಸಂಜೆಯ ಹೊತ್ತಲ್ಲಿ ಮನೆಗೆ ಬಂದಿದ್ದ ಹಂತಕರು ಮನೆಯ ಹಾಲ್ ನಲ್ಲಿಯೇ ಚಾಕುವಿನಿಂದ ಇರಿದು ಕವಿತಾಳನ್ನ ಕೊಲೆ ಮಾಡಿದ್ದಾರೆ. ನಂತರ ಮನೆಯ ರೂಮ್ ಪ್ರವೇಶಿಸಿ ಗೋಡ್ರೆಜ್ ನಲ್ಲಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ.

ಪತ್ನಿ ಕೊಲೆಯಾಗಿರೋ ಕುರಿತು ಡಾ.ರೇವಂತ್ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಬಂದ ಕಡೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿರೋ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ. ಹತ್ಯೆ ಮಾಡಿರುವವರು ಮನೆಯ ಗೋಡ್ರೆಜ್ ನಲ್ಲಿರುವ ವಸ್ತುಗಳನ್ನು ಕಳವು ಮಾಡಿರುವುದು ಪತ್ತೆಯಾಗಿರೋ ಹಿನ್ನೆಲೆಯಲ್ಲಿ ದರೋಡೆ ಉದ್ದೇಶದಿಂದಲೇ ಈ ಕೃತ್ಯವೆಸಗಿರಬಹುದು ಅಂತಾ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯಿಂದಾಗಿ ಕಡೂರು ಜನತೆ ಬೆಚ್ಚಿಬಿದ್ದಿದ್ದಾರೆ.