ನವದೆಹಲಿ : ಲೋಕಸಭಾ ಸಚಿವಾಲಯ ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿದೆ. ಲೋಕಸಭಾ ಸಚಿವಾಲಯದ ಪಾರ್ಲಿಮೆಂಟರಿ ರಿಸರ್ಚ್ ಆಯಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ (ಪ್ರೈಡ್) ಸಂಸ್ಥೆಯ ನಡೆಯ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಕ್ಕೆ ಅವಮಾನವಾಗುತ್ತಿದ್ದರೂ ಕೂಡ ಕರ್ನಾಟಕದ ಸಂಸದರು ಮಾತ್ರ ಮೌನವಹಿಸಿದ್ದಾರೆ.
ಪಾರ್ಲಿಮೆಂಟರಿ ರಿಸರ್ಚ್ ಆಯಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ (ಪ್ರೈಡ್) ಸಂಸ್ಥೆಯು ಆನ್‌ಲೈನ್ ಮೂಲಕ ಇದೇ 22ರಿಂದ 6 ವಿದೇಶಿ ಭಾಷೆಗಳು, 6 ದೇಶಿಯ ಭಾಷೆಗಳ ಕಲಿಕಾ ತರಬೇತಿಯನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ಸಂಸತ್ತಿನ ಸದಸ್ಯರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಿದೇಶಿ ಭಾಷೆಗಳಾದ ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಕಲಿಸಲಾಗುತ್ತಿದೆ. ಅದೇ ರೀತಿ, ದೇಶೀಯ ಭಾಷೆಗಳಾದ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು ಮತ್ತು ತೆಲುಗು ಭಾಷೆಯು ಈ ಕಲಿಕೆಯ ಭಾಗವಾಗಿದೆ. ಆದರೆ ಕನ್ನಡಕ್ಕೆ ಇಲ್ಲಿ ಸ್ಥಾನಮಾನ ನೀಡಲಾಗಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ದಕ್ಷಿಣ ಭಾರತದ ತಮಿಳು, ತೆಲುಗು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೊಡ್ಡ ಸಂಖ್ಯೆಯಲ್ಲಿ ಕರ್ನಾಟಕ ಸಂಸದರನ್ನು ಗೆಲ್ಲಿಸಿದ್ದು ಅಲ್ಲಿಗೆ ಸಾರ್ಥಕ.ಈ ಬಗ್ಗೆ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡದ ಅವಗಣನೆ ಸರಿಯಲ್ಲ, ತಮಿಳು, ತೆಲುಗುಗಳಿಗೆ ನೀಡಿದ್ದ ಮನ್ನಣೆ ಕನ್ನಡಕೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬರಗೂರು , ಕೇಂದ್ರ ಸರಕಾರವೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ.ಸಂಸದರಿಗೆ ಕಲಿಸುವ ಭಾಷೆಗಳ ಪಟ್ಟಿಯಿಂದ ಈ ಭಾಷೆಯನ್ನು ಕೈಬಿಟ್ಟಿರುವ ಖಂಡನೀಯ ಅಂದಿದ್ದಾರೆ.
ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಲೋಕಸಭಾ ಸಚಿವಾಲಯ ಕನ್ನಡವನ್ನು ಕೈಬಿಟ್ಟಿರುವುದು ಅತ್ಯಂತ ನೋವಿನ ಸಂಗತಿ. ಯಾವ ಮಾನದಂಡಗಳಡಿ ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುವುದನ್ನು ಪ್ರಶ್ನಿಸಬೇಕಾಗಿದೆ ಅಂದಿದ್ದಾರೆ. ಇನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜೂ. 22ರ ಬೆಳಗ್ಗೆ 10.30ಕ್ಕೆ ಆನ್‌ಲೈನ್ ಮೂಲಕ ಭಾಷಾ ಕಲಿಕೆಗೆ ಚಾಲನೆ ನೀಡಲಿದ್ದಾರೆ. ಫ್ರಾನ್ಸ್, ಜರ್ಮನಿ, ಜಪಾನ್, ಪೋರ್ಚುಗಲ್, ಸ್ಪೈನ್, ರಷ್ಯಾ ರಾಯಭಾರಿಗಳು ಭಾಗವಹಿಸಲಿದ್ದಾರೆ. 30 ತಾಸುಗಳ ಕೋರ್ಸ್ ಇದಾಗಿದೆ.