ಬೆಂಗಳೂರು : ಖ್ಯಾತ ಉದ್ಯಮಿ, ಚಿತ್ರ ನಿರ್ಮಾಪಕ, ಸಿನಿಮಾ ವಿತರಕ ಕಪಾಲಿ ಮೋಹನ್ ಸಾವಿನ ರಹಸ್ಯ ಬಯಲಾಗಿದೆ. ಹೋಟೆಲ್ ನಲ್ಲಿ ನೇಣಿಗೆ ಶರಣಾಗೋ ಮುನ್ನ ಸೆಲ್ಪಿ ವಿಡಿಯೋ ಮತ್ತು ಆಡಿಯೋ ಮಾಡಿರೋ ಮೋಹನ್ ತನ್ನ ಸಾವಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬಳಿಯಲ್ಲಿ ತನಗೆ ನ್ಯಾಯಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿಯ ನಿವಾಸಿಯಾಗಿರೋ ಕಪಾಲಿ ಮೋಹನ್ ಬೆಂಗಳೂರಿನಲ್ಲಿ ಸಿನಿಮಾ ನಿರ್ಮಾಪಕರಾಗಿ, ಚಲನಚಿತ್ರ ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ, ಫೈನಾನ್ಸ್ ವ್ಯವಹಾರದ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಹೋಟೆಲ್ ವ್ಯವಹಾರವನ್ನು ಆರಂಭಿಸಿ ಯಶಸ್ಸು ಕಂಡಿದ್ದರು. ಆದರೆ ತನ್ನದೇ ಮಾಲಿಕತ್ವದ ಬೆಂಗಳೂರಿನ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿರುವ ಸುಪ್ರೀಂ ಹೋಟೆಲ್ ಇದೀಗ ನೇಣಿಗೆ ಶರಣಾಗಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗ್ಯಾಂಬ್ಲಿಂಗ್ ನಡೆಸೋ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಪಾಲಿ ಮೋಹನ್ ಅವರಿಗೆ ಸೇರಿದ ಮನೆ ಹಾಗೂ ಫೈನಾನ್ಸ್ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ಮೋಹನ್ ಕುಗ್ಗಿ ಹೋಗಿದ್ದರು. ಇದೇ ಕಾರಣದಿಂದಲೇ ವಿ.ಕೆ. ಮೋಹನ್ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ತನ್ನ ಸಾವಿಗೆ ಕಾರಣವೇನು ಅನ್ನೋದನ್ನು ವಿಕೆ ಮೋಹನ್ ಸಾವಿಗೂ ಮುನ್ನ ಮಾಡಿರೋ ಸೆಲ್ಪಿ ವಿಡಿಯೋ ಹಾಗೂ ಆಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ ಎನ್ನಲಾಗುತ್ತಿದೆ.

ಡಾ.ರಾಜ್ ಕುಮಾರ್ ಕುಟುಂಬಕ್ಕೆ ಅತ್ಯಾಪ್ತರಾಗಿದ್ದ ವಿಕೆ ಮೋಹನ್ ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೆ ಸೇರಿದ್ದ ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದಾರೆ. ಪುನಿತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿಯೂ ನಟನೆ ಮಾಡಿದ್ದರು.

ಸಿನಿಮಾ ರಂಗದಲ್ಲಿ ಕಪಾಲಿ ಮೋಹನ್ ಅಂತಾನೆ ಖ್ಯಾತಿ ಪಡೆದಿದ್ದ ವಿಕೆ ಮೋಹನ್, ಕಳೆದ 7 ವರ್ಷಗಳ ಹಿಂದೆ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಆರಂಭವಾದಾಗ ಟೆಂಡರ್ ನಲ್ಲಿ ಅತೀ ಹೆಚ್ಚು ಹಣವನ್ನು ನೀಡಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿ ಜಾಗ ಖರೀದಿಸಿದ್ದರು. ಆ ಜಾಗದಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಸುಪ್ರೀಂ ಅನ್ನೋ ಹೋಟೆಲ್ ಆರಂಭಿಸಿದ್ದರು.

ಆರಂಭದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದ ಮಾದರಿಯಲ್ಲಿ ಬಸವೇಶ್ವರ ಬಸ್ ನಿಲ್ದಾಣಕ್ಕೆ ಆರಂಭದಲ್ಲಿ ಉಡುಪಿ, ಮಂಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಹಲವು ಬಸ್ಸುಗಳನ್ನು ತಂಗಲು ಸರಕಾರ ಪ್ಲಾನ್ ಮಾಡಿತ್ತು.

ಆದರೆ ನಂತರದಲ್ಲಿ ಬಸ್ ನಿಲ್ದಾಣವನ್ನು ಸ್ಥಗಿತಗೊಳಿಸಿ ಬಸ್ಸುಗಳು ಮೆಜಿಸ್ಟಿಕ್ ನಿಂದಲೇ ಹೊರಡುವಂತೆ ಆದೇಶಿಸಿತ್ತು. ಇದರಿಂದಾಗಿ ಕಳೆದ 7 ವರ್ಷಗಳಿಂದಲೂ ಸುಪ್ರೀಂ ಹೋಟೆಲ್ ನಷ್ಟದಲ್ಲಿಯೇ ನಡೆಯುತ್ತಿತ್ತು.

ಈ ಕುರಿತು ಕಪಾಲಿ ಮೋಹನ್ ಸಾಕಷ್ಟು ಬಾರಿ ಸರಕಾರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಡುವಲ್ಲೇ ಸಿಸಿಬಿ ದಾಳಿಯಿಂದಾಗಿ ಮಾನಸಿಕವಾಗಿ, ಆರ್ಥಿಕವಾಗಿ ಕುಗ್ಗಿ ಹೋಗಿದ್ದರು. ಇದೇ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಕೆ ಮೋಹನ್ ಸೆಲ್ಪಿ ವಿಡಿಯೋ ಮತ್ತು ಆಡಿಯೋ ಮಾಡಿ ಮುಖ್ಯಮಂತ್ರಿಗಳು ತನಗೆ ನ್ಯಾಯಕೊಡಿಸಿ ಅಂತಾ ಹೇಳಿ ಹೋಟೆಲ್ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಸಾವಿಗೂ ಮುನ್ನ ಮಗನಿಗೆ ಕರೆ ಮಾಡಿದ್ದ ಮೋಹನ್ !
ನಿನ್ನೆ ಸಂಜೆಯ ವೇಳೆಯಲ್ಲಿ ಹೋಟೆಲ್ ಗೆ ಬಂದಿದ್ದ ಕಪಾಲಿ ಮೋಹನ್ ರಾತ್ರಿ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆಯಲ್ಲಿ ಹಲವರಿಗೆ ಕರೆ ಮಾಡಿ ತೆಗೆದುಕೊಂಡಿರುವ ಹಣ ನೀಡುವಂತೆಯೂ ಮನವಿ ಮಾಡಿಕೊಂಡಿದ್ದರು. ಅಲ್ಲದೇ ತನ್ನ ಮಗನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದರು.

ಹೀಗಾಗಿ ಕಪಾಲಿ ಮೋಹನ್ ಅವರ ಮಗ ಹೋಟೆಲ್ ಗೆ ಬಂದು ತಂದೆಯನ್ನು ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ ತಾನು ಮನೆಗೆ ಬರುವುದಿಲ್ಲ. ಹೋಟೆಲ್ ನಲ್ಲಿಯೇ ಇರುತ್ತೇನೆ ಎಂದಾಗ, ತಂದೆ ಅನಾಹುತ ಮಾಡಿಕೊಳ್ಳುವುದು ಬೇಡಾ ಅಂತಾ ಮೋಹನ್ ಅವರ ಬಳಿಯಲ್ಲಿದ್ದ ಗನ್ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಮೋಹನ್
ಸಿಸಿಬಿ ದಾಳಿಯ ನಂತರದಲ್ಲಿ ವ್ಯವಹಾರದಲ್ಲಿ ಮೋಹನ್ ಸಾಕಷ್ಟು ನೊಂದು ಹೋಗಿದ್ದರು. ಸಿಸಿಬಿ ದಾಳಿಯಲ್ಲಿ ಬಂಧಿತರಾಗಿ ಬಿಡುಗಡೆಯಾದ ನಂತರದಲ್ಲಿ ಕುಟುಂಬಸ್ಥರೆಲ್ಲಾ ಸುಬ್ರಹ್ಮಣ್ಯಕ್ಕೆ ತೆರಳಿದ್ದ ವೇಳೆಯಲ್ಲಿ ಮನೆಯಲ್ಲಿ ಒಬ್ಬರೇ ಇದ್ದ ವಿಕೆ ಮೋಹನ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಕಪಾಲಿ ಮೋಹನ್ ಬದುಕುಳಿದಿದ್ದರು. ಈ ಹಿನ್ನೆಲೆಯಲ್ಲಿ ಮನೆಯವರು ವಿಕೆ ಮೋಹನ್ ಅವರನ್ನು ಸಾಕಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಕಪಾಲಿ ಮೋಹನ್ ಆತ್ಮಹತ್ಯೆಯ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರೋ ಗಂಗಮ್ಮನ ಗುಡಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.