ಬೆಂಗಳೂರು : ಯುಕೆ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ ಮಾಡಲಾಗಿತ್ತು. ಆದ್ರೆ ಆದೇಶ ಜಾರಿಯಾಗುವ ಮೊದಲೇ ರಾಜ್ಯ ಸರಕಾರ ನೈಟ್ ಕರ್ಪ್ಯೂ ಆದೇಶವನ್ನು ವಾಪಾಸ್ ಪಡೆದಿದೆ.
ಬ್ರಿಟನ್ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾ ರೂಪಾಂತರ ವೈರಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ತಜ್ಞರ ಸಮಿತಿಯ ಸಲಹೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈಟ್ ಕರ್ಪ್ಯೂ ಆದೇಶವನ್ನು ಜಾರಿ ಮಾಡಿದ್ದರು. ಆರಂಭದಲ್ಲಿ ಡಿಸೆಂಬರ್ 23ರ ರಾತ್ರಿಯಿಂದಲೇ ನೈಟ್ ಕರ್ಪ್ಯೂ ಹೇರಲಾಗಿತ್ತು. ಆದರೆ ಸಂಜೆಯ ವೇಳೆಗೆ ಸರಕಾರದ ಆದೇಶದಲ್ಲಿ ಬದಲಾವಣೆಯಾಗಿತ್ತು. ಸರಕಾರದ ಆದೇಶದ ವಿರುದ್ದ ರಾಜ್ಯದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು.
ಅಷ್ಟೇ ಅಲ್ಲಾ ಕೆಲವು ಬಿಜೆಪಿ ಶಾಸಕರೇ ಸರಕಾರದ ಕ್ರಮವನ್ನು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಲಹೆಯ ಹಿನ್ನೆಲೆಯಲ್ಲೀಗ ರಾಜ್ಯ ಸರಕಾರ ಆದೇಶವನ್ನು ವಾಪಾಸ್ ಪಡೆದಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ನೈಟ್ ಕರ್ಪ್ಯೂ ಆದೇಶ ವಾಪಾಸ್ ಪಡೆದಿರುವ ಬೆನ್ನಲ್ಲೇ ರಾಜ್ಯದ ಜನತೆ ಕೊರೊನಾ ವೈರಸ್ ಸೋಂಕಿನ ನಿಯಂತ್ರಣದ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.