ಕೊನೆಗೂ ಸಂಕ್ರಾಂತಿ ಎದುರಿನಲ್ಲಿ ಸಚಿವ ಸ್ಥಾನ ಆಕಾಂಕ್ಷಿತ ಶಾಸಕರಿಗೆ ಯೋಗ ಕೂಡಿ ಬಂದಿದ್ದು ಬುಧವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಂ ಬಿಎಸ್ವೈ ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.

ರಾಜ್ಯಪಾಲರ ಭೇಟಿಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್ವೈ, ನಾಳೆ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. ನಾನೇ ನಿಮಗೆ ನೂತನ ಸಚಿವರ ಪಟ್ಟಿ ಕೊಡುತ್ತೇನೆ. ಊಹಿಸಿ ಹೆಸರುಗಳನ್ನು ಹಾಕಿ ಗೊಂದಲ ಸೃಷ್ಟಿಸಬೇಡಿ ಎಂದು ಮನವಿ ಮಾಡಿದರು. ‘

ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ನಾಳೆ ಸಂಜೆ 4 ಗಂಟೆಗೆ ಪ್ರಮಾಣವಚನ ಸಮಾರಂಭಕ್ಕೆ ಸಮಯ ಹಾಗೂ ಅನುಮತಿ ಕೋರಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಕೆಲ ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆ ಕೇವಲ ವದಂತಿಯಾಗಿತ್ತು.

ಈಗ ಹೈಕಮಾಂಡ್ ಒಪ್ಪಿಗೆ ಮೇರೆಗೆ ಬಿಜೆಪಿಯ 7 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದವರಿಗೆ ಮೊದಲು ಆದ್ಯತೆ ನೀಡೋದರ ಜೊತೆಗೆ ಬಿಜೆಪಿಯ ಹಿರಿಯ ಶಾಸಕರಿಗೂ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು.

ಇದೀಗ ಮೂಲಗಳ ಮಾಹಿತಿ ಪ್ರಕಾರ ಸಿದ್ಧವಾಗಿರುವ ಸಚಿವರ ಪಟ್ಟಿಯಲ್ಲಿ ಸಿಎಂ ಆಪ್ತ ಶಾಸಕ ರೇಣುಕಾಚಾರ್ಯ, ಮುರುಗೇಶ್ ನಿರಾಣಿ,ರಾಮದಾಸ್ ಹೆಸರುಗಳಿಲ್ಲ. ಬದಲಾಗಿ ಎಂಟಿಬಿ ನಾಗರಾಜ್, ಪೂರ್ಣಿಮಾ,ಶಂಕರ್,ಉಮೇಶ್ ಕತ್ತಿ ಹೆಸರುಗಳಿವೆ ಎನ್ನಲಾಗುತ್ತಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಸಿ.ಪಿ.ಯೋಗೇಶ್ವರ್ ಗೂ ಅವಕಾಶ ನೀಡಲಾಗಿದ್ದು, ಇದು ಬಿಜೆಪಿಗರ ಅಸಮಧಾನಕ್ಕೆ ಕಾರಣವಾಗೋ ಸಾಧ್ಯತೆ ದಟ್ಟವಾಗಿದೆ.