ಬೆಂಗಳೂರು: ಬೈ ಎಲೆಕ್ಷನ್ ಎದುರಲ್ಲೇ ಕಾಂಗ್ರೆಸ್ ನ ಬಣ ರಾಜಕೀಯ ಬೀದಿಗೆ ಬಿದ್ದಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಡಿ.ಕೆ.ಶಿವಕುಮಾರ್ ಸಿಎಂ ಎಂದು ಕಾಂಗ್ರೆಸ್ ಶಾಸಕಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಆರ್‌ಆರ್. ನಗರ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಒಕ್ಕಲಿಗ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದ್ದು ಡಿಕೆಶಿಯವರೇ ಮುಂದಿನ ಸಿಎಂ ಎಂದಿದ್ದಾರೆ.

ಇದೇ ಸಭೆಯಲ್ಲಿ ಮಾತನಾಡಿದ ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತ ರಾಯಪ್ಪ, ಮುಂದೇ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ. ಸಿಎಂ ಆಗಬೇಕು ಅಂದ್ರೇ ಈ ಎರಡು ಕ್ಷೇತ್ರ ಗೆಲ್ಲಬೇಕು. ಇದಕ್ಕಾಗಿ ಒಕ್ಕಲಿಗ ನಾಯಕರು ಈಗಲಾದ್ರೂ ಒಂದಾಗಬೇಕು ಎಂದಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಬಾಗಲಕೋಟೆಯಲ್ಲಿ ಮಾತನಾಡಿದ್ದ ಶಾಸಕ ಜಮೀರ್ ಅಹ್ಮದ್, ಯಾವುದೇ ಕ್ಷಣದಲ್ಲಾದರೂ ಚುನಾವಣೆ ಬರಬಹುದು. ಬಂದರೇ ಮುಂದಿನ ಸಿಎಂ ಸಿದ್ಧರಾಮಯ್ಯ ಎಂದಿದ್ದರು.

ಹೀಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಮುಸುಕಿನ ಗುದ್ದಾಟದಂತಿದ್ದ ಸಿದ್ದು ಹಾಗೂ ಡಿಕೆಶಿ ವೈಮನಸ್ಸು ಮುನ್ನಲೆಗೆ ಬಂದಂತಾಗಿದ್ದು, ಬಣ ರಾಜಕೀಯದ ಲೆಕ್ಕಾಚಾರ ಬಹಿರಂಗವಾಗತೊಡಗಿದೆ.

ಒಂದೆಡೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ಎಲ್ಲ ಹುದ್ದೆಗಳಿಗೆ ತಮ್ಮ ಆಪ್ತರನ್ನೇ ನೇಮಿಸುವ ಮೂಲಕ ಸಿದ್ಧು ಬಣಕ್ಕೆ ಟಾಂಗ್ ನೀಡುತ್ತಿದ್ದಾರೆ.ಇನ್ನೊಂದೆಡೆ ಡಿಕೆಶಿ ಆಪ್ತರು ಡಿಕೆಶಿ ಮುಂದಿನ ಸಿಎಂ ಅಭ್ಯರ್ಥಿ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

ಇನ್ನೊಂದೆಡೆ ಸಿದ್ಧರಾಮಯ್ಯ ಭಂಟರು ರಾಜ್ಯದ ಎಲ್ಲೆಡೆಯೂ ಮುಂದಿನ ಸಿಎಂ ಎಂದು ಡಂಗುರ ಸಾರಲಾರಂಭಿಸಿದ್ದಾರೆ.

ಇದು ಕಾಂಗ್ರೆಸ್ ಮೂಲ ನಿವಾಸಿಗರು ಹಾಗೂ ವಲಸಿಗರ ನಡುವಿನ ಕದನವೋ ಅಥವಾ ಪ್ರಭಾವಿ ಜನಾಂಗ ಒಕ್ಕಲಿಗರು ಹಾಗೂ ಕುರುಬರ ನಡುವಿನ ಕಲಹವೋ ಎಂಬ ಕುತೂಹಲ ಸೃಷ್ಟಿಯಾಗಿದೆ.

ಇತ್ತ ಕಾಂಗ್ರೆಸ್ ನ ಈ ಒಳ ಜಗಳ ವನ್ನು ಬಿಜೆಪಿ ಉಪಚುನಾವಣೆಯ ಅಖಾಡದಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾ ಅನ್ನೋದನ್ನು ಕಾದುನೋಡಬೇಕಿದೆ.