ಬೆಂಗಳೂರು: ಉಡುಪಿ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಪೀಠಾಧಿಕಾರಿಯಾಗಿ ಅಪ್ರಾಪ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಕ್ಷೇಪ ಸಲ್ಲಿಸಲಾಗಿದೆ.

ಹೈಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಪೀಠಕ್ಕೆ ಉತ್ತರಾಧಿಕಾರಿಯಾಗಿ 16 ವರ್ಷದ ಬಾಲಕನನ್ನು ಆಯ್ಕೆ ಮಾಡಲಾಗಿದೆ. ಈ ರೀತಿ ಅಪ್ರಾಪ್ತರನ್ನು ಸನ್ಯಾಸಕ್ಕೆ ಆಯ್ಕೆ ಮಾಡಿರುವುದು ಕಾನೂನು ಬಾಹಿರ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ವಿಚಾರಣೆಯನ್ನು ವಾರಗಳ ಕಾಲ ಮುಂದೂಡಿದೆ. ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ಕೆಲವೇ ದಿನಗಳ ಹಿಂದೆ ಅನಿರುದ್ಧ ಸರಳತ್ತಾಯ ಅವರನ್ನು ಆಯ್ಕೆ ಮಾಡಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ನಿಡ್ಲೆ ಮೂಲದ ಅನಿರುದ್ಧ ಸರಳತ್ತಾಯ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದು, ಉಡುಪಿಯ ವಿದ್ಯೋದಯ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೊರೈಸಿದ್ದಾರೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋದೆ ವಾದಿರಾಜ ಮಠದಲ್ಲಿ ಮೇ 14 ರಿಂದ ಮೂರು ದಿನಗಳ ಕಾಲ ನಡೆದ ಸರಳ ಕಾರ್ಯಕ್ರಮದಲ್ಲಿ ಸನ್ಯಾಸ ಸ್ವೀಕಾರ ವಿಧಿಗಳು ಮುಗಿದಿವೆ. ಅಷ್ಠಮಠಗಳಲ್ಲಿ ಪೀಠದ ಉತ್ತರಾಧಿಕಾರಿಯಾಗಿ ಬಾಲವಟುವಿನ ಆಯ್ಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇದೇ ಸಂಪ್ರದಾಯದಂತೆ ವಟುವಿನ ಆಯ್ಕೆ ಮಾಡಿ ಘೋಷಿಸಿದ್ದೇವೆ. ಈ ಬಗ್ಗೆ ಎಲ್ಲಾ ಯತಿಗಳ ಗಮನಕ್ಕೂ ತರಲಾಗಿದೆ ಎಂದು ಶಿರೂರಿನ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
