ಎಲ್ಲ ರಂಗಗಳಲ್ಲೂ ಸಮಾನ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿರುವ ತೃತೀಯಲಿಂಗಿಗಳು ಕೇರಳ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.

ಕೇರಳದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಪ್ರಯತ್ನ ನಡೆದಿದ್ದು, ೨೮ ವರ್ಷದ ಅನನ್ಯಾಕುಮಾರಿ ವೆಂಗಾರಾ ಕ್ಷೇತ್ರದಿಂದ ಡೆಮಾಕ್ರಾಟಿಕ್ ಸೋಷಿಯಲ್ ಜಸ್ಟಿಸ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ.

೨೮ ವರ್ಷದ ಅನನ್ಯಾ ಕುಮಾರಿ ಈಗಾಗಲೇ ಕೇರಳದ ಮೊದಲನೇ ತೃತೀಯ ಲಿಂಗಿ ಆರ್ ಜೆ ಹಾಗೂ ನ್ಯೂಸ್ ಆಂಕ್ಯರ್ ಆಗಿಯೂಕೆಲಸ ನಿರ್ವಹಿಸಿದ್ದು, ಈಗ ತಮಗಿರುವ ಜನಪ್ರಿಯತೆ ಬಳಸಿಕೊಂಡು ವಿಧಾನಸಭೆ ಮೆಟ್ಟಿಲೇರುವ ಪ್ರಯತ್ನ ನಡೆಸಿದ್ದಾರೆ.

ವೆಂಗಾರಾ ಕ್ಷೇತ್ರದಲ್ಲಿ ಎಲ್.ಡಿ.ಎಫ್ ನಿಂದ ಪಿ.ಜೀಜಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂನಿಂದ ಪಿ.ಕೆ.ಕನ್ಹಲಿಕುಟ್ಟಿ ಕಣಕ್ಕಿಳಿದಿದ್ದಾರೆ. ಈ ಇಬ್ಬರು ಪ್ರಭಾವಿಗಳ ವಿರುದ್ಧ ಅನನ್ಯಾ ಸೆಣಸಲಿದ್ದಾರೆ.

ತಾವು ತೃತೀಯ ಲಿಂಗಿಗಳು ಮಹಿಳೆಯರು ಹಾಗೂ ಪುರುಷರಂತೆ ಸಾಮರ್ಥ್ಯ ಹೊಂದಿದ್ದೇವೆ. ನಮಗೆ ಸಿಂಪಥಿ ಬೇಡ. ಅವಕಾಶ ಬೇಕು. ಅವಕಾಶ ಸಿಕ್ಕರೆ ಸಮಾಜದ ಮುಖ್ಯವಾಹಿನಿಗೆ ಬಂದು ಬದಲಾವಣೆ ತರಬಹುದು ಎಂದು ಅನನ್ಯಾ ಹೇಳಿದ್ದಾರೆ.ಒಟ್ಟಿನಲ್ಲಿ ಕೇರಳ ಚುನಾವಣೆ ಹಲವು ಸಾಮಾಜಿಕ ಸುಧಾರಣೆ ತರುವ ಸಾಧ್ಯತೆಗಳನ್ನು ಹುಟ್ಟುಹಾಕುವ ಭರವಸೆ ಮೂಡಿಸಿದೆ.