ಕುಂದಾಪುರ : ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ದೋಣಿಯೊಂದು ಬಂಡೆಗೆ ಬಡಿದು, ಮೂವರು ನಾಪತ್ತೆಯಾಗಿರುವ ಘಟನೆ ಕೊಡೇರಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರಿಮಂಜೇಶ್ವರಿ ಸಮೀಪದ ಕೊಡೇರಿ ಬಂದರಿನಿಂದ ಇಂದು ಹತ್ತು ಮಂದಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆಯನ್ನು ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಅಲೆಗಳ ತೀವ್ರತೆಗೆ ಸಾಗರಶ್ರೀ ಹೆಸರಿನ ನಾಡದೋಣಿ ಬಂಡೆಗೆ ಬಡಿದಿದೆ. ಇದರಿಂದಾಗಿ ದೋಣಿಗೆ ಸಂಪೂರ್ಣ ಹಾನಿಯಾಗಿದೆ.

ದೋಣಿಯಲ್ಲಿದ್ದ ಮೀನುಗಾರರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕರಾವಳಿ ಕಾವಲು ಪಡೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗಾಗಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.