ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಬ್ರಹ್ಮಾವರ ತಾಲೂಕಿನಲ್ಲಿ ಆರ್ಭಟ ಜೋರಾಗಿದೆ. ಇಂದು ಕೋಟತಟ್ಟು, ಮಣೂರು, ಗಿಳಿಯಾರು, ಯಡ್ತಾಡಿ, ಹೊಸಾಳ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಬಿ.ಬೋರಯ್ಯ ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಕಾಪು ಪೊಲೀಸ್ ಠಾಣೆಯ ಎಎಸ್ಐಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ಕೋಟತಟ್ಟುವಿನಲ್ಲಿರುವ ಎಎಸ್ಐ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಎಎಸ್ಐ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿರುವ ಸಾಲಿಗ್ರಾಮದ ಹೋಟೆಲ್ ನಲ್ಲಿ ಕಲಸ ಮಾಡುತ್ತಿದ್ದ ಇನ್ನೋರ್ವ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಣೂರಿನಲ್ಲಿ ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಇನ್ನು ಬಾರಕೂರಿನ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೊಸಾಳದಲ್ಲಿರುವ ಮನೆ ಹಾಗೂ ದಿನಸಿ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯಲ್ಲಿಯೇ ಒಟ್ಟು 8 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 8 ಕಡೆಗಳಲ್ಲಿ ಕಂಟೈನ್ಮೆಂಟ್ ಝೋನ್ ರಚಿಸಲಾಗಿದೆ.

ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮ ಲೆಕ್ಕಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.