ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಬಲವರ್ಧನೆ ಹಾಗೂ ಕೌಟುಂಬಿಕವಾಗಿ ಮಗಳ ಮದುವೆ ಸಂಭ್ರಮದಲ್ಲಿರೋ ಡಿಕೆಶಿಗೆ ಸಿಬಿಐ ಶಾಕ್ ನೀಡಿದೆ.
ಡಿ.ಕೆ.ಶಿವಕುಮಾರ್ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿರುವ ಸಿಬಿಐ ಖುದ್ದು ವಿಚಾರಣೆಗೆ ಹಾಜರಾಗು ವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಸಮನ್ಸ್ ನೀಡಿದೆ. ನವೆಂಬರ್ 25ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಅಕ್ಟೋಬರ್ 5 ರಂದು ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು. ಕೇವಲ ಡಿಕೆಶಿ ನಿವಾಸ ಮಾತ್ರವಲ್ಲದೇ ಸಂಸದ ಡಿ.ಕೆ.ಸುರೇಶ್ ಹಾಗೂ ಡಿಕೆಶಿಯವರ ತಾಯಿ ಗೌರಮ್ಮನವರ ನಡುವೆ ನಿವಾಸದ ಮೇಲೂ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಈ ದಾಳಿಗೆ ಸಂಬಂಧಿಸಿದಂತೆ ಡಿ.ಕೆ.ಶಿಯವರಿಗೆ ಸಿಬಿಐ ಸಮನ್ಸ್ ನೀಡಿದೆ ಎನ್ನಲಾಗಿದೆ. ಈ ಸಮನ್ಸ್ ಹಿನ್ನೆಲೆಯಲ್ಲಿ ಮತ್ತೆ ಡಿಕೆಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಬಳ್ಳಾರಿ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಸಿಬಿಐ ಸಮನ್ಸ್ ವಿಚಾರಕ್ಕೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.