ಮಂಗಳೂರು : ಕೆಎಸ್ಆರ್ ಟಿಸಿ ಅಧಿಕಾರಿಗಳ ವಿರುದ್ದ ನೌಕರರು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕೆಎಸ್ಆರ್ ಟಿಸಿ ನಿರ್ವಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.

ಕೆಎಸ್ಆರ್ ಟಿಸಿ ಬಂಟ್ವಾಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿರ್ವಾಹಕ ಬಾಲಕೃಷ್ಣ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟು ನಂತರ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಡೆತ್ ನೋಟ್ ನಲ್ಲಿ ಕೆಎಸ್ಆರ್ ಟಿಸಿಯ ಅಧಿಕಾರಿಗಳ ಕಿರುಕುಳವನ್ನು ಉಲ್ಲೇಖಿಸಿದ್ದಾರೆ. ಸಂಸ್ಥೆ ತನ್ನನ್ನು ಬದುಕಲು ಬಿಡುತ್ತಿಲ್ಲ, ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇನ್ನು ಡೆತ್ ನೋಟ್ ನಲ್ಲಿ ಕೌಟುಂಬಿಕ ಕಲಹದ ಬಗ್ಗೆಯೂ ಹೇಳಿಕೊಂಡಿದ್ದಾರೆ. ತನ್ನ ಸಹೋದರನ ವಿರುದ್ದವೂ ಆರೋಪ ಮಾಡಿದ್ದಾರೆ. ನನ್ನ ಮಕ್ಕಳು ಹಾಗು ತಾಯಿಯನ್ನು ಒಳ್ಳೆಯದರಲ್ಲಿ ನೋಡಿಕೊಳ್ಳಿ ಎಂದ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಜೊತೆಗೆ ಅಧಿಕಾರಿಗಳು ಮಾನಸಿಕ ಹಿಂಸೆ ನೀಡುವುದರಿಂದಾಗಿ ಅತಿಯಾದ ಕೆಲಸದ ಒತ್ತಡಕ್ಕೆ ಒಳಗಾಗಿದ್ದರು. ಸಾಲದಕ್ಕೆ ಕೌಟುಂಬಿಕ ಸಮಸ್ಯೆಯ ಜೊತೆಗೆ ಮಗುವಿನ ಅನಾರೋಗ್ಯ ಬಾಲಕೃಷ್ಣ ಅವರನ್ನು ಚಿಂತಿಗೀಡು ಮಾಡಿತ್ತು ಎನ್ನಲಾಗುತ್ತಿದೆ.